

ಬೀದರ್: ರೈತರು ಕೃಷಿ ಜತೆಗೆ ಹೈನುಗಾರಿಕೆ ಮಾಡಿ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಹೇಳಿದರು.
ನಗರ ಹೊರವಲಯದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಂವಿಧಾನ ಹಾಗೂ ಹಾಲು ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಶು ವಿಶ್ವವಿದ್ಯಾಲಯ ಹಾಗೂ ಕಾಲೇಜಿಗೆ ಅಗತ್ಯ ಸೌಲಭ್ಯ ಜತೆಗೆ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೂ ಸಹಕಾರ ನೀಡಲಾಗುವುದು ಎಂದರು.
ಪಶು ವಿಶ್ವವಿದ್ಯಾಲಯ ವ್ಯವಸ್ಥಾಪಕ ಮಂಡಳಿ ಸದಸ್ಯ ಬಸವರಾಜ ಭತಮುರ್ಗೆ ಮಾತನಾಡಿ, ಕೃಷಿಯೊಂದಿಗೆ ರೈತರು ಹೈನುಗಾರಿಕೆಗೆ ಆದ್ಯತೆ ನೀಡಿದರೆ ಆರ್ಥಿಕವಾಗಿ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಕುಲಪತಿ ಡಾ.ಕೆ.ಸಿ. ವೀರಣ್ಣ ಮಾತನಾಡಿದರು. ಪಟ್ನಾದ ಪ್ರಾಧ್ಯಾಪಕ ಪ್ರೊ.ರಾಜೇಶ್ವರನ್, ಕರ್ನಾಟಕ ರಾಜೋತ್ಸವ ಪುರಸ್ಕೃತ ಡಾ.ಪ್ರಕಾಶ ಭಟ್ ವಿಶೇಷ ಉಪನ್ಯಾಸ ನೀಡಿದರು.
ಡೀನ್ ಡಾ.ಎಂ.ಕೆ. ತಾಂದಳೆ ಅಧ್ಯಕ್ಷತೆ ವಹಿಸಿದ್ದರು. ವಿವಿ ಎನ್ನೆಸ್ಸೆಸ್ ಸಂಯೋಜಕ ಡಾ.ಚನ್ನಪ್ಪಗೌಡ ಬಿರಾದಾರ್ ಇತರರಿದ್ದರು. ಡಾ.ಸತೀಶಚಂದ್ರ ಬಿರಾದಾರ್ ಸ್ವಾಗತಿಸಿದರು. ಡಾ.ಅಂಬಿಕಾ ನಿರೂಪಣೆ ಮಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಡಾ.ಪೃಥ್ವಿರಾಜ್, ಡಾ.ಪ್ರವೀಣ ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞೆ ಮಾಡಿಸಿದರು.