

ಬೀದರ್: ವಿದ್ಯಾರ್ಥಿಗಳು ಭಗವದ್ಗೀತೆ ಪಠಣ ಮಾಡಬೇಕು. ಅದರ ಸಾರ ಅರಿತುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತ ಪ್ರಮುಖ ಸಾಮಕೃಷ್ಣ ಸಾಳೆ ಹೇಳಿದರು.
ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ವತಿಯಿಂದ ಭಗವದ್ಗೀತೆ ಅಭಿಯಾನ ನಿಮಿತ್ತ ಇಲ್ಲಿಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಜೀವನದ ಮಾರ್ಗಸೂಚಿಯಾಗಿದೆ. ಯಾವ ರೀತಿ ಬದುಕಬೇಕು ಎನ್ನುವುದನ್ನು ಕಲಿಸುತ್ತದೆ ಎಂದು ತಿಳಿಸಿದರು.
ಭಗವದ್ಗೀತೆಯಲ್ಲಿ 18 ಅಧ್ಯಾಯ ಹಾಗೂ 700 ಶ್ಲೋಕಗಳಿವೆ. ಅದರಲ್ಲಿ ಜೀವನದ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ ಎಂದು ಹೇಳಿದರು.
ಭಗವದ್ಗೀತೆ ಅಭಿಯಾನದ ಮಹಿಳಾ ಸಮಿತಿಯ ಉಪಾಧ್ಯಕ್ಷೆ ಗೀತಾ ಪರಮೇಶ್ವರ್ ಭಟ್ ಹಾಗೂ ಮಂಜುಳಾ ಕುಲಕರ್ಣಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪಠಣ ಮಾಡಿಸಿದರು.
ಭಗವದ್ಗೀತೆ ಅಭಿಯಾನದ ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಳಿ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನದ ಸಹ ಕಾರ್ಯದರ್ಶಿ ವೇದಪ್ರಕಾಶ್ ಜೋಶಿ ಉಪಸ್ಥಿತರಿದ್ದರು.
ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಸ್ವಾಗತಿಸಿದರು. ಪ್ರೌಢಶಾಲೆಯ ಶಿಕ್ಷಕಿ ಅಲ್ಕಾವತಿ ನಿರೂಪಿಸಿದರು. ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.