

ಬೀದರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‍ಸಿಬಿ) ಕ್ರಿಕೆಟ್ ಪ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಪುಟ ತೆರೆದಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಆರ್‍ಸಿಬಿ ಯಾವ ಕಾರಣಕ್ಕಾಗಿ ಹಿಂದಿ ಪುಟ ತೆರೆದಿದೆ ಎಂಬುದ್ದನ್ನು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿ ಹೇರುವುದು ಅದರ ಉದೇಶವಾಗಿದ್ದರೆ ಕರ್ನಾಟಕ ಬಿಟ್ಟು ತೊಲಗಬೇಕು ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಹೇಳಿದ್ದಾರೆ.
ಆರ್‍ಸಿಬಿಯನ್ನು ಕನ್ನಡಿಗರು ಮೊದಲಿನಿಂದಲೂ ಬೆಂಬಲಿಸುತ್ತ ಬಂದಿದ್ದಾರೆ. ಆರ್‍ಸಿಬಿಗೆ ಇರುವಷ್ಟು ಅಭಿಮಾನಿಗಳು ಬೇರಾವ ತಂಡಕ್ಕೂ ಇಲ್ಲ. ಹೀಗಾಗಿಯೇ ಅದರ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಒಮ್ಮೆಯೂ ಕಪ್ ಗೆಲ್ಲದಿದ್ದರೂ ಮೂರನೇ ಶ್ರೀಮಂತ ತಂಡವಾಗಿದೆ. ಇದಕ್ಕೆ ಕನ್ನಡಿಗರು ಕಾರಣ ಎಂಬುದ್ದನ್ನು ಅದು ಮರೆತಂತಿದೆ ಎಂದು ಕಿಡಿ ಕಾರಿದ್ದಾರೆ.
ಆರ್‍ಸಿಬಿ ಹಿಂದಿಯಲ್ಲಿ ಪುಟ ತೆರೆದು ಕನ್ನಡಿಗರನ್ನು ಅವಮಾನಿಸಿದೆ. ಇತರ ರಾಜ್ಯಗಳ ಆಟಗಾರರಿದ್ದಾರೆ, ಹೊರ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ ಎಂಬ ಕಾರಣಕ್ಕೆ ಪುಟ ತೆರೆಯುವುದಾದರೆ ದೇಶದ ಎಲ್ಲ ಭಾಷೆಯಲ್ಲೂ ತೆರೆಯಬೇಕಿತ್ತು. ಹಿಂದಿಯಲ್ಲಿ ಮಾತ್ರ ಏಕೆ ತೆರೆದಿದೆ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಪರವಾಗಿ ಆಡುತ್ತಿರುವ ಹಲವಾರು ಪ್ರತಿಭಾವಂತ ಆಟಗಾರರನ್ನು ಆರ್‍ಸಿಬಿ ನಿರ್ಲಕ್ಷಿಸುತ್ತಲೇ ಬಂದಿದೆ. ಈ ಬಾರಿಯೂ ಅದೇ ಆಗಿದೆ. ತಂಡದಲ್ಲಿ ಖಾಲಿ ಇರುವ ಮೂರು ಸ್ಥಾನಗಳಿಗೆ ಕನ್ನಡಿಗ ಆಟಗಾರರನ್ನೇ ಖರೀದಿ ಮಾಡಬೇಕು. ಸಾಮಾಜಿಕ ಜಾಲತಾಣದಿಂದ ಹಿಂದಿ ಪುಟ ಕೂಡಲೇ ಅಳಿಸಿ ಹಾಕಬೇಕು. ಇಲ್ಲವಾದರೆ ಕನ್ನಡಿಗರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.