

ಬೀದರ್: ಬೀದರ್, ಔರಾದ್ ಹಾಗೂ ಹುಮನಾಬಾದ್ ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕಿಶೋರಿಯರಿಗೆ ದಿ ಹಂಗರ್ ಪ್ರೊಜೆಕ್ಟ್ ಅಡಿಯಲ್ಲಿ ನಾಯಕತ್ವ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಸಮರಸ ಸಂಸ್ಥೆಯ ಕಾರ್ಯದರ್ಶಿ ವೇದಮಣಿ ಹೇಳಿದರು.
ನಗರದ ಸಮರಸ ಸಂಸ್ಥೆಯ ಕಚೇರಿಯಲ್ಲಿ ದಿ ಹಂಗರ್ ಪ್ರೊಜೆಕ್ಟ್ ಸಹಯೋಗದಲ್ಲಿ ಭಾನುವಾರ ನಡೆದ ತಾಲ್ಲೂಕಿನ ಚಿಟ್ಟಾ, ಹೊಕ್ರಾಣ(ಬಿ), ಅಮಲಾಪುರ ಹಾಗೂ ಬರೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಶೋರಿಯರ ಮೇಳದಲ್ಲಿ ಅವರು ಮಾತನಾಡಿದರು.
13 ರಿಂದ 19 ವರ್ಷದ ಒಳಗಿನ ಕಿಶೋರಿಯರಲ್ಲಿ ಶಿಕ್ಷಣದ ಮಹತ್ವ, ಮಕ್ಕಳ ಹಕ್ಕುಗಳು,
ಬಾಲ್ಯ ವಿವಾಹದ ದುಷ್ಪರಿಣಾಮ, ಪೋಕ್ಸೊ ಕಾಯ್ದೆ, ವೈಯಕ್ತಿಕ ಸ್ವಚ್ಛತೆ ಮತ್ತಿತರ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಶಶಿಕಲಾ, ಡಾ. ಜೈಶೀಲ, ಗುನ್ನಳ್ಳಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಮಂಗಲಾ, ನಂದಿನಿ ಇದ್ದರು.