

ಬೀದರ್: ಜೀವನದಲ್ಲಿ ಸೋಲಾದರೆ ಧೃತಿಗೆಡದಿರಿ. ಗೆಲುವಿಗೆ ಮತ್ತೆ ಮತ್ತೆ ಪ್ರಯತ್ನಿಸಿ ಎಂದು ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಇಲ್ಲಿಯ ಇನ್ಫಿನಿಟಿ ಶಾಲೆಯ ನೂತನ ಕ್ಯಾಂಪಸ್‍ನಲ್ಲಿ ನಡೆದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾನು ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಸೋತರೂ ಧೈರ್ಯ, ಸಂಯಮ ಕಳೆದುಕೊಳ್ಳಲಿಲ್ಲ. ಮನೆಯಲ್ಲಿ ಸುಮ್ಮನೆ ಕೂರಲೂ ಇಲ್ಲ. ಆದ ಲೋಪಗಳನ್ನು ಸರಿಪಡಿಸಿಕೊಂಡು ಮತ್ತೆ ಪ್ರಯತ್ನಿಸಿದೆ. ಗೆಲುವು ಒಲಿಯಿತು ಎಂದು ತಿಳಿಸಿದರು.
ಹೋಮಿಯೊಪಥಿ ವೈದ್ಯನಾದ ನನಗೆ ರೋಗಿಗಳ ವೈದ್ಯಕೀಯ ಸೇವೆ ಮಾಡುವ ಅವಕಾಶ ಇತ್ತು. ಆದರೆ, ಜನ ಸೇವೆಯ ತುಡಿತದಿಂದ ರಾಜಕೀಯ ಪ್ರವೇಶಿಸಿದೆ. ಜಿ.ಪಂ ಸದಸ್ಯೆಯಾಗಿದ್ದ ತಾಯಿ ಅವರಿಂದ ಮಾರ್ಗದರ್ಶನ ಪಡೆದೆ. ಸೋಲು-ಗೆಲುವಿನಲ್ಲಿ ತಂದೆ-ತಾಯಿ, ಪತ್ನಿ ಬೆನ್ನೆಲುಬಾಗಿ ನಿಂತರು ಎಂದು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವೆ. ಬೀದರ್ ಕೈಗಾರಿಕೆ ಜಿಲ್ಲೆಯಾಗಲು ಎಸ್.ಇ.ಝಡ್‍ನಂಥ ಯೋಜನೆಗಳು ಅವಶ್ಯಕ. ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಮಂಜೂರಾತಿಗೆ ಪ್ರಯತ್ನಿಸುವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಡಾ. ನೀತಾ ಬೆಲ್ದಾಳೆ ದಂಪತಿ, ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಳ್ಳಬೇಕು. ಗುರಿ ತಲುಪಲು ಪರಿಶ್ರಮ ಪಡಬೇಕು. ಎಷ್ಟೇ ಅಡೆ ತಡೆಗಳು ಎದುರಾದರೂ ಗುರಿ ಮುಟ್ಟುವವರೆಗೆ ವಿರಮಿಸಬಾರದು ಎಂದು ಕಿವಿಮಾತು ಹೇಳಿದರು.
ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳು ಹಾಗೂ ಸಾಧಕರ ಪ್ರೇರಣಾದಾಯಕ ಕತೆ ಹಾಗೂ ಅನುಭವ ಹಂಚಿಕೊಳ್ಳುವ ವೇದಿಕೆಯೇ ಮನದಾಳದ ಮಾತು. ಇದು, ಇತರರಿಗೆ ಸಾಧನೆಗೆ ಪ್ರೇರೇಪಿಸಲು ಸಹಕಾರಿಯಾಗಲಿದೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ನಿರಂಜನ್ ಶೀಲವಂತ ತಿಳಿಸಿದರು.
ಪ್ರಾಚಾರ್ಯೆ ಲಕ್ಷ್ಮಿ ಮುಗಳಿ, ಪ್ರಮುಖರಾದ ನಿತಿನ್ ಕರ್ಪೂರ, ಸಚ್ಚಿದಾನಂದ ಚಿದ್ರೆ ಮತ್ತಿತರರು ಇದ್ದರು. ವಿದ್ಯಾರ್ಥಿಗಳು, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.