

ಭಾಲ್ಕಿ: ಗಡಿಭಾಗದಲ್ಲಿ ಹೆತ್ತವರಿಗೆ ಬೇಡವಾದ ಮಕ್ಕಳನ್ನು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ರಕ್ಷಣೆ ಮಾಡುವ ಮೂಲಕ ಸಮಾಜದಲ್ಲಿನ ಅನಾಥಪ್ರಜ್ಞೆವನ್ನು ದೂರ ಮಾಡುತ್ತಿರುವುದು ಹೆಮ್ಮೆ ತರಿಸಿದೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ತಿಪ್ಪೆ, ಚರಂಡಿಯಲ್ಲಿ ಬೀಸಾಡಿದ ಮಕ್ಕಳನ್ನು ಕರೆತಂದು ತಾಯಿ ಪ್ರೀತಿ, ತಂದೆ ರಕ್ಷಣೆ ನೀಡಿ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕಲ್ಪಿಸಿ ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತಿರುವುದು ಮಾದರಿ ಎಂದು ಹೇಳಿದರು.
ದೇಶದ ಮೂಲೆ ಮೂಲೆ ಸುತ್ತಿದ್ದೇನೆ. ಆದರೆ ಈ ನೆಲದಲ್ಲಿ ಪೂಜ್ಯರು ಸಲ್ಲಿಸುತ್ತಿರುವ ಶಿಕ್ಷಣ, ಸಮಾಜ, ಧಾರ್ಮಿಕ ಕ್ಷೇತ್ರದಲ್ಲಿನ ಸೇವೆ ಶ್ಲಾಘನೀಯ. ಮುಂದೊಂದು ದಿನ ಸಂಸ್ಕೃತಿ, ಪರಂಪರೆ ಹೊಂದಿರುವ ಈ ಶರಣರ ಭೂಮಿಗೆ ರಾಷ್ಟ್ರಪತಿ ಅವರನ್ನು ಕರೆತರುವುದಾಗಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, 1992ರಲ್ಲಿ ನಲವತ್ತು ಮಕ್ಕಳು, ಇಬ್ಬರು ಶಿಕ್ಷಕರಿಂದ ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಬಸವಣ್ಣನವರ ಆಶೀರ್ವಾದ, ನಮ್ಮ ಗುರುಗಳ ಕರುಣೆ ಮತ್ತು ಭಕ್ತರ ಸಹಾಯದಿಂದ ಗಡಿಭಾಗದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದರು.
ಶ್ರೀ ಸಿದ್ದಯ್ಯ ಸ್ವಾಮೀಜಿ, ಶಾಸಕ ಶರಣು ಸಲಗರ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್, ಸಂಸ್ಥೆಯ ನಿದರ್ೇಶಕ ಚನ್ನಬಸವ ಬಳತೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಕಿಶನರಾವ ಪಾಟೀಲ್ ಇಂಚೂರಕರ್, ಸಂಸ್ಥೆಯ ಆಡಳಿತಾಕಾರಿ ಮೋಹನರಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಇತರರಿದ್ದರು. ಮಧುಕರ ಗಾಂವಕರ್ ನಿರೂಪಣೆ ಮಾಡಿ, ವಂದಿಸಿದರು.