

ಬೀದರ್: ನಿವೇಶನಗಳ ಮಾರಾಟದ ಅನುಮತಿಗಾಗಿ ಹತ್ತು ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಇಲ್ಲಿನ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತರು ಸೇರಿ ಮೂವರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಿಡಿಎ ಆಯುಕ್ತ ಶ್ರೀಕಾಂತ ಚಿಮಕೋಡೆ, ಪ್ರಾಧಿಕಾರದ ಯೋಜನಾ ಸದಸ್ಯ ಚಂದ್ರಕಾಂತರಡ್ಡಿ ಹಾಗೂ ಅವರ ಆಪ್ತ ಸಿದ್ದೇಶ್ವರ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಹೊರವಲಯದ ಚಿಕ್ಕಪೇಟ್ ಬಳಿಯ ಸರ್ವೇ ನಂ.26ರಲ್ಲಿ ಕೃಷಿಯೇತರ ಜಮೀನಿನ ನಿವೇಶಗಳನ್ನು ಮಾರಾಟಕ್ಕೆ ಅನುಮತಿ ನೀಡಲು ಆಯುಕ್ತ ಚಿಮಕೋಡೆ ಹಾಗೂ ಚಂದ್ರಕಾಂತರಡ್ಡಿ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಪ್ರತಾಪನಗರದ ಬಳಿ ಆಯುಕ್ತ ಚಿಮಕೋಡೆ ಹಾಗೂ ಚಂದ್ರಕಾಂತ ಅವರ ಆಪ್ತ ಸಿದ್ದೇಶ್ವರ ಮುಂಗಡವಾಗಿ 10 ಲಕ್ಷ ರೂ. ನಗದು ಪಡೆಯುತ್ತಿದ್ದಾಗ ದಾಳಿ ನಡೆದಿದೆ. ನಂತರ ಚಿಮಕೋಡೆ, ಚಂದ್ರಕಾಂತ ಅವರನ್ನು ವಶಕ್ಕೆ ಪಡೆಯಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ನೌಬಾದೆ ನೀಡಿದ ದೂರಿನ ಮೇಲೆ ದಾಳಿ ನಡೆದಿದೆ. ಎಸ್ಪಿ ಉಮೇಶ ಬಿ.ಕೆ. ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಸಂತೋಷ ರಾಠೋಡ್, ಬಾಬಾಸಾಹೇಬ್ ಪಟೇಲ್, ಅರ್ಜುನಪ್ಪ, ಸಿಬ್ಬಂದಿ ವಿಷ್ಣುರಡ್ಡಿ, ಶ್ರೀಕಾಂತ, ಶಾಂತಲಿಂಗಪ್ಪ, ವಿಜಯಶೇಖರ, ಅಡೆಪ್ಪ, ಕಿಶೋರಕುಮಾರ, ಕುಶಾಲ, ಭರತ, ಶುಕ್ಲೋಧನ, ಸುವರ್ಣಾ ಇದ್ದರು.