ಕಾನೂನು ಬಾಹಿರ ಕಟ್ಟಡಗಳಿಗೆ ಆಸ್ಪದ ಬೇಡ

aurad meeting
Published on

ಔರಾದ: ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಯ ಗಮನಕ್ಕೆ ಇಲ್ಲದೇ ಸಾಕಷ್ಟು ಕಟ್ಟಡಗಳನ್ನು ಅನಧಿಕೃತವಾಗಿ ನಿರ್ಮಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂಥವುಗಳಿಗೆ ಆಸ್ಪದ ಕೊಡಬಾರದೆಂದು ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ ತಿಳಿಸಿದರು.

ಪಟ್ಟಣ ಪಂಚಾಯಿತಿಯಲ್ಲಿ ನ.೨೨ರಂದು ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಪಟ್ಟಣ ಪಂಚಾಯಿತಿಗೆ ಒಂದು ಅರ್ಜಿ ಕೂಡ ಕೊಡದೇ ಕಾನೂನು ಬಾಹಿರವಾಗಿ ರಾಜಾರೋಶವಾಗಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
 ಪಟ್ಟಣದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಕಟ್ಟಡಗಳನ್ನು ಅನಧಿಕೃತವಾಗಿ ನಿರ್ಮಿಸಿರುವುದು ಪಟ್ಟಣ ಪಂಚಾಯಿತಿಯ ಗಮನಕ್ಕೆ ಬಂದಿದೆ. ಇವರಿಗೆ ನೋಟಿಸ್ ನೀಡುವ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಅಂತಹ ಕಟ್ಟಡಗಳ ಮೇಲೆ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು. ಶಾಸಕರು ಪ್ರತಿಕ್ರಿಯಿಸಿ, ನಾನು ಕಾನೂನು ಬಾಹಿರ ಕೆಲಸಗಳಿಗೆ ಯಾವತ್ತೂ ಆಸ್ಪದ ಕೊಡುವುದಿಲ್ಲ. ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸಬೇಕೆಂದು ಹೇಳಿದರು.
 ಪಟ್ಟಣಕ್ಕೆ ಶಾಶ್ವತವಾಗಿ ನೀರಿನ ಸಮಸ್ಯೆ ಇತ್ಯರ್ಥಪಡಿಸಲು ಸಾಕಷ್ಟು ಪ್ರಯತ್ನ ವಹಿಸಿ ಕಾರಂಜಾ ಜಲಾಶಯದಿಂದ ಔರಾದ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ೮೪ ಕೋಟಿಯ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. ಕೆಲವು ದಿನಗಳಲ್ಲಿ ಕೆಲಸ ಕೂಡ ಆರಂಭಗೊಳ್ಳಲಿದೆ ಎಂದು ಹೇಳಿದರು. ಜಲ ಜೀವನ್ ಮಿಷನ್ ಅಡಿಯಲ್ಲಿ ಕೆಲಸ ಕಳಪೆಯಾಗಿದೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದಾಗ ಶಾಸಕರು ಮಾತನಾಡಿ, ಪಟ್ಟಣದಲ್ಲಿ ಜೆಜೆಎಂ ಅಡಿಯಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದು ವರ್ಷಕ್ಕೂ ಹೆಚ್ಚು ಸಮಯವಾದರೂ ಕೆಲಸ ಆರ್ಧಕ್ಕೆ ನಿಲ್ಲಿಸಿ ಜನತೆಗೆ ಏಕೆ ತೊಂದರೆ ಕೊಡುತ್ತಿದ್ದೀರಿ ಎಂದು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಪಟ್ಟಣವನ್ನು ಸುಂದರವಾಗಿಸುವ ಕನಸು ಹೊಂದಿದ್ದು, ಅದರಂತೆ ಎಪಿಎಂಸಿ ವೃತ್ತದಿಂದ ತಹಸೀಲ್ ಕಛೇರಿವರೆಗೆ ಉತ್ತಮ ರಸ್ತೆಯನ್ನು ನಿರ್ಮಿಸಿ ಸುಂದರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಟ್ರೀ ಪಾರ್ಕ ನಿರ್ಮಿಸಲಾಗುತ್ತಿದೆ. ಪಟ್ಟಣಕ್ಕೆ ಮಾಸ್ಟರ್ ಪ್ಲಾನ್ ಕೂಡ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಪಟ್ಟಣ ಸುಂದರೀಕರಣ ಕೆಲಸ ವ್ಯವಸ್ಥಿತವಾಗಿ ನಡೆಯಲಿದೆ. ರಿಂಗ್ ರೋಡ್ ನಿರ್ಮಿಸುವ ಯೋಜನೆ ಹೊಂದಿದ್ದು, ಅಧಿಕಾರಿಗಳು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಸ್ವಚ್ಛತೆ ಮತ್ತು ಘನತ್ಯಾಜ್ಯ ವಿಲೇವಾರಿ ಕುರಿತ ಚರ್ಚೆ ವೇಳೆ ಘನತ್ಯಾಜ್ಯ ವಿಲೇವಾರಿಗಾಗಿ ಪಟ್ಟಣಕ್ಕೆ ಕೋಟ್ಯಾಂತರ ಮೌಲ್ಯದ ಯಂತ್ರಗಳನ್ನು ತರಲಾಗಿದೆ. ಆದರೆ ಅವುಗಳನ್ನು ನಿರ್ವಹಿಸುತ್ತಿಲ್ಲವೆಂದು ಪಟ್ಟಣ ಪಂಚಾಯಿತಿಯ ಸದಸ್ಯ ದಯಾನಂದ ಘೂಳೆ ಬೇಸರ ಹೊರಹಾಕಿದರು.  ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಪಟ್ಟಣ ಪಂಚಾಯಿತಿಯಿAದ ವಿವರಣೆ ಪಡೆದರು. ನಾನು ಒಂದು ಸಲ ಖುದ್ದಾಗಿ ಸ್ಥಳ ವೀಕ್ಷಣೆ ಮಾಡುವುದಾಗಿ ತಿಳಿಸಿದರು.
ಪಟ್ಟಣ ಪಂಚಾಯಿತಿಗೆ ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಎಲ್ಲರೂ ಅವರಿಗೆ ಸಹಕರಿಸಬೇಕು. ಪಟ್ಟಣದ ಸ್ವಚ್ಛತೆ ಮೊದಲ ಆದ್ಯತೆಯಾಗಬೇಕು. ಪ್ರತಿ ವಾರ್ಡ್ನಲ್ಲಿ ಸ್ವಚ್ಛತೆ ಕೈಗೊಳ್ಳಬೇಕು. ಪಟ್ಟಣದಲ್ಲಿ ಉದ್ಯಾನಗಳಿಗೆ ಸ್ಥಳ ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕು. ಪ್ರತಿ ವಾರ್ಡ್ನಲ್ಲಿ ನೀರು, ವಿದ್ಯುತ್ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಕಾಲಕಾಲಕ್ಕೆ ಸಭೆಗಳನ್ನು ನಡೆಸಬೇಕು. ಅಧಿಕಾರಿಗಳು ವಾರ್ಡ್ಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘೂಳೆ, ಉಪಾಧ್ಯಕ್ಷರಾದ ರಾಧಾಬಾಯಿ ಕೃಷ್ಣ ನರೋಟೆ, ಪಟ್ಟಣ ಪಂಚಾಯಿತಿಯ ಸದಸ್ಯರಾದ ಧೊಂಡಿಬಾ ನರೋಟೆ, ಸಂತೋಷ ಪೋಕಲವಾರ, ದಯಾನಂದ ಘುಳೆ, ಗುಂಡಪ್ಪ ಮುಧಾಳೆ, ಸಂಜು ವಡೆಯರ್, ಬನ್ಸಿಲಾಲ ಖೇರಾನಾಯಕ್, ಸಂಗೀತಾ ಯಾದುರಾವ, ಪ್ರೇರಣಾ ಬಾಬು, ಅಂಬಿಕಾ ಕೇರಬಾ ಪವಾರ, ಶೀಲಾಬಾಯಿ, ಸುರೇಖಾ ಸೂರ್ಯಕಾಂತ, ನೀಲಮ್ಮ ಚಂದ್ರಶೇಖರ, ಅಬ್ಜಲ್‌ಖಾನ್ ವಾಹೀದ್‌ಖಾನ್, ಪ್ರಶಾಂತ ಅಶೋಕ, ಲಕ್ಷ್ಮೀಬಾಯಿ ಬಾಬುರಾವ ಸೇರಿದಂತೆ ಸದಸ್ಯರು, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net