

ಬೀದರ್: ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ 81ನೇ ಜಯಂತಿ ಮಹೋತ್ಸವಕ್ಕೆ ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆಯಿತು.
ಮಠದಲ್ಲಿ ಜಪ, ಧ್ಯಾನ, ನಾಣ್ಯಗಳಿಂದ ಶ್ರೀಗಳ ತುಲಾಭಾರ, ಪ್ರವಚನ ಮತ್ತಿತರ ಕಾರ್ಯಕ್ರಮಗಳು ನಡೆದವು.
ವಿವಿಧೆಡೆಯ ಭಕ್ತರು ಶ್ರೀಗಳನ್ನು ಸತ್ಕರಿಸಿದರು. ಪ್ರವಚನ ಆಲಿಸಿ, ಪ್ರಸಾದ ಸ್ವೀಕರಿಸಿದರು.
ಸದ್ಗುರು ಕೃಪೆಯ ನೌಕೆ ಬೇಕು: ಜಯಂತಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಚಳಂಬದ ಪ್ರಣವಾನಂದ ಸ್ವಾಮೀಜಿ ಅವರು, ಸಂಸಾರವೊಂದು ದುಃಖದ ಸಾಗರ. ಇದನ್ನು ದಾಟಲು ಸದ್ಗುರು ಕೃಪೆಯೆಂಬ ನೌಕೆ ಬೇಕು ಎಂದು ನುಡಿದರು.
ಸದ್ಗುರು ಕರುಣಾಮಯಿ ಆಗಿದ್ದಾನೆ. ಆತನ ಚರಣಕ್ಕೆ ಶರಣಾದರೆ ಸಾಕು ಕೃಪೆಯಾಗುತ್ತದೆ ಎಂದು ತಿಳಿಸಿದರು.
ಕಲಬುರಗಿಯ ಪೂರ್ಣಪ್ರಜ್ಞಾ ಯೋಗಾಶ್ರಮದ ಮಾತೆ ಲಕ್ಷ್ಮಿದೇವಿ ಅವರು, ಜೀವ ಶರೀರದಿಂದ ಶರೀರಕ್ಕೆ ತಿರುಗುತ್ತಿದೆ. ಅದು ಮುಕ್ತಿ ಹೊಂದುವುದು ಯಾವಾಗ ಎಂದು ಯೋಚಿಸಬೇಕಿದೆ. ಅದನ್ನು ಬಿಟ್ಟು ಮನುಷ್ಯ ವ್ಯರ್ಥ ಕಾಲಹರಣ ಮಾಡುತ್ತಿದ್ದಾನೆ ಎಂದು ಹೇಳಿದರು.
ಈಗ ಉಣ್ಣುತ್ತಿರುವುದು ಹಿಂದೆ ಮಾಡಿದ ಪುಣ್ಯದ ಫಲ. ಈಗಿನ ಪುಣ್ಯದ ಫಲ ಮುಂದೆ ಉಣ್ಣಲು ಬರುತ್ತದೆ. ಕಾರಣ, ಪುಣ್ಯವನ್ನೇ ಮಾಡಬೇಕು ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಡಾ. ಶಿವಕುಮಾರ ಸ್ವಾಮೀಜಿ ಅವರು, ಜೀವನದಲ್ಲಿ ಸದ್ಗುರುವಿನ ಅನುಗ್ರಹದಿಂದಲೇ ಸುಖ, ಶಾಂತಿ, ಸಮಾಧಾನ ದೊರಕುತ್ತದೆ ಎಂದು ಹೇಳಿದರು.
ನಮ್ಮ ಮನಸ್ಸಿನಲ್ಲಿ ಗುರುವಿದ್ದರೆ ಸಾಲದು. ಗುರುವಿನ ಮನಸ್ಸಿನಲ್ಲೂ ನಾವಿರಬೇಕು. ಗುರುಕೃಪೆ ಪುಸ್ತಕದಿಂದ ಆಗುವಂಥದ್ದಲ್ಲ. ಅಂತಃಕರಣದಿಂದ ಆಗುವಂಥದ್ದು ಎಂದು ತಿಳಿಸಿದರು.
ಸದ್ಗುರು ಸೇವೆಗೆ ಮಾತ್ರ ಒಲಿಯುತ್ತಾನೆ. ಜಾಣತನಕ್ಕೆ ಒಲಿಯುವುದಿಲ್ಲ. ಹೇ! ಸದ್ಗುರುವೇ ನನ್ನ ಮೇಲೆ ಕೃಪೆ ಮಾಡು, ಕಾಮ, ಕ್ರೋಧ, ಲೋಭ, ಮೋಹವೆಂಬವು ನನ್ನ ಶಾಂತಿ, ಸಮಾಧಾನ ಹಾಳು ಮಾಡಿವೆ ಎಂದು ಅಂತಃಕರಣ ಪೂರ್ವಕ ಗುರುವಿಗೆ ಶರಣು ಹೋಗಬೇಕು. ಆಗ ಬ್ರಹ್ಮಾನಂದ ರಸಾನುಭೂತಿ ವಾಕ್ಯಾಮೃತ ಮಳೆ ಸುರಿಸಿ ಧನ್ಯವಾಗಿ ಮಾಡುತ್ತಾನೆ ಎಂದರು.
ಜಡಿಸಿದ್ದೇಶ್ವರ ಸ್ವಾಮೀಜಿ, ಪರಮಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಡಾ. ಸ್ವರೂಪಾನಂದ ಸ್ವಾಮೀಜಿ, ಪೂರ್ಣನಂದ ಸ್ವಾಮೀಜಿ, ಗಣೇಶಾನಂದ ಮಹಾರಾಜ ಅದ್ವೈತಾನಂದ ಸ್ವಾಮೀಜಿ, ಸದ್ರೂಪಾನಂದ ಸ್ವಾಮೀಜಿ, ಮಾತೆ ಸಿದ್ದೇಶ್ವರಿ, ಮಾತೆ ಸಂಗೀತಾದೇವಿ, ಮಾತೆ ಆನಂದಮಯಿ, ಅಮೃತಾನಂದಮಯಿ, ಗೋಪಾಲ ಶಾಸ್ತ್ರಿ, ಸಾಧಕರಾದ ಸತೀಶ, ವಿನಾಯಕ, ಸಿದ್ದು, ಪ್ರಭು, ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಿ.ಜಿ. ಶೆಟಕಾರ್, ಶಿವಶರಣಪ್ಪ ಸಾವಳಗಿ, ಶರಣಪ್ಪ ತಿರ್ಲಾಪುರೆ, ಉದಯಭಾನು ಹಲವಾಯಿ, ಈಶ್ವರಗೌಡ ಕಮಡಳ್ಳಿ, ಭಾರತಿಬಾಯಿ ಕಣಜಿ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಡಾ. ಚಂದ್ರಪ್ಪ ಭತಮುರ್ಗೆ, ಲಕ್ಷ್ಮಣ ಎಂ. ಪೂಜಾರಿ, ಬಸವರಾಜ ಮ್ಯಾಗೇರಿ, ನಾಗಪ್ಪ ಜಾನಕನೋರ ಇದ್ದರು.
ಜಯಂತಿ ಮಹೋತ್ಸವ ನವೆಂಬರ್ 26 ರವರೆಗೆ ನಡೆಯಲಿದೆ.