

ಔರಾದ್: ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಔರಾದ್ ಹಾಗೂ ಕಮಲನಗರ ತಾಲೂಕಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಡಿ ತಾಲೂಕು ಪಂಚಾಯಿತಿ ಕಚೇರಿ ಸಭಾಂಗದಲ್ಲಿ ಆಯೋಜಿಸಿದ್ದ ಸಾಹಿತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಮನೆ ಭಾಷೆ ಬಂಜಾರ ಆದರೂ ಮಾತೃಭಾಷೆ ಕನ್ನಡವೇ ಆಗಿದೆ. ನನ್ನ ತನು, ಮನದಲ್ಲಿ ಕನ್ನಡ ಅಡಗಿದೆ ಎಂದರು.
ಅನಿವಾರ್ಯ ಕಾರಣಗಳಿಂದ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಲು ಸಾಧ್ಯವಾಗಿಲ್ಲ. ಆದರೆ ಮುಂದಿನ ಪೀಳಿಗೆಗೆ ಸಮಸ್ಯೆ ಆಗದಿರಲಿ ಎಂಬ ಉದ್ದೇಶದಿಂದ ಬಹಳಷ್ಟು ಕಡೆ ಕನ್ನಡ ಶಾಲೆ ತೆರೆಯುವ ಕೆಲಸ ಮಾಡಿದ್ದೇನೆ. ಜಿಲ್ಲಾ, ತಾಲೂಕು ಮತ್ತು ವಲಯ ಸಾಹಿತ್ಯ ಸಮ್ಮೇಳನ ನಡೆಸಿದ್ದೇನೆ. ಸಾಹಿತ್ಯ ಪರಿಷತ್ನವರು ಹೇಳಿದ ಎಲ್ಲ ಕನ್ನಡದ ಕೆಲಸ ಮಾಡುತ್ತಿರುವೆ. ಆದರೆ ಕೆಲವರ ಅನಗತ್ಯ ಆರೋಪಗಳಿಗೆ ತಲೆಕೆಡಿಸಿಕೊಳ್ಳದೆ ನನ್ನ ಕೆಲಸ ನಿರಂತರ ಮುಂದುವರಿಸುವೆ ಎಂದು ತಿಳಿಸಿದರು.
ಕನ್ನಡ ಭಾಷೆ ರಕ್ಷಣೆಗಾಗಿ ನಿರಂತರ ಶ್ರಮಿಸುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತಿಗಳು ಮತ್ತು ಕಲಾವಿದರ ಮನೆಗೆ ಭೇಟಿ ನೀಡಿ ಸನ್ಮಾನಿಸುತ್ತ ಬಂದಿರುವೆ. ಕನ್ನಡಕ್ಕಾಗಿ ದುಡಿಯುವವರನ್ನು ಗೌರವಿಸುವುದು ನನ್ನ ಸೌಭಾಗ್ಯ ಎಂದರು.
ಕನ್ನಡ ನಾಡು ನುಡಿ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸುಂದರ ಕನ್ನಡ ಭವನ ನಿರ್ಮಾಣಗೊಂಡಿದೆ. ಅದರಂತೆ ಎಲ್ಲ ತಾಲೂಕು ಕೇಂದ್ರಗಳಲ್ಲೂ ಭವನ ನಿರ್ಮಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿದರು. ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವಕುಮಾರ ಕಟ್ಟೆ, ಟಿ.ಎಂ. ಮಚ್ಚೆ, ತಾಲೂಕು ಅಧ್ಯಕ್ಷರಾದ ಡಾ.ಶಾಲಿವಾನ ಉದಗೀರೆ, ಪ್ರಶಾಂತ ಮಠಪತಿ, ತಾಪಂ ಎಡಿ ಶಿವಕುಮಾರ ಘಾಟೆ, ಶಿವಣಕರ, ಗುರುನಾಥ ರಾಜಗೀರಾ, ಅಂಬಾದಾಸ ನೇಳಗೆ, ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ್ ಮುಂಗನಾಳ, ಸಚಿನ್ ರಾಠೋಡ್, ಬಸವರಾಜ ಹಳ್ಳೆ, ಜಗನ್ನಾಥ ದೇಶಮುಖ, ಮಲ್ಲಿಕಾರ್ಜುನ ಟಂಕಸಾಲೆ, ಅಶೋಕ ಶೆಂಬೆಳ್ಳೆ ಇತರರಿದ್ದರು. ಶಿವಲಿಂಗ ಹೇಡೆ ನಿರೂಪಣೆ ಮಾಡಿದರು. ಕಸಾಪದಿಂದ ಶಾಸಕ ಚವ್ಹಾಣ್ ಅವರಿಗೆ ಸಾಹಿತ್ಯ ಸಂವರ್ಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ
ಸಾಹಿತಿ ಸಂಗಮ ಕಾರ್ಯಕ್ರಮದಡಿ ಔರಾದ್ ಹಾಗೂ ಕಮಲನಗರ ತಾಲೂಕಿನ ಸಾಹಿತಿಗಳಿಗೆ ಶಾಸಕ ಪ್ರಭು ಚವ್ಹಾಣ್ ಅವರು ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿದರು. ಸಾಹಿತಿಗಳಾದ ನಾಗಯ್ಯ ಸ್ವಾಮಿ, ಬಸವರಾಜ ಸ್ವಾಮಿ, ರೇಣುಕಾ ಮಠ, ಶಿಲ್ಪಾ ರಾಜನಾಳೆ, ಅಶ್ವಿನಿ ಸುಂದಾಳೆ, ಜ್ಯೋತಿ ಬುಮ್ಮ, ತುಕಾರಾಮ ರಾಜನಾಳೆ, ಸಂಗಮೇಶ ಬೆಲ್ದಾಳ, ನಾಗೇಶ ಮಡಿವಾಳ, ಜಯಪ್ರಕಾಶ ಅಲ್ಮಾಜೆ, ಪೂಜಾ ಪಟ್ನೆ, ರಾಜೇಂದ್ರ ಯರನಳ್ಳೆ, ಪರಮೇಶ ಡಿ.ವಿಲಾಸಪುರೆ, ಬಸವರಾಜ ಪಾಂಚಾಳ, ಪ್ರಕಾಶ ದೇಶಮುಖ, ಬಲಭೀಮ ಕುಲಕರ್ಣಿ, ನಂದಾದೀಪ ಬೋರಾಳೆ, ಬಾಲಾಜಿ ಕುಂಬಾರ, ಪುಷ್ಪಾವತಿ ಚಿಕುರ್ತೆ, ಮಾಣಿಕಾದೇವಿ ಪಾಟೀಲ್, ರಾಜಕುಮಾರ ಬಿರಾದಾರ್, ಕಾಶೀನಾಥ ಬಾವಗೆ, ವಿಶಾಲ ಮಹಾಜನ್, ಡಾ.ವಿಶ್ವನಾಥ ಕಿವಡೆ, ರಾಜಶೇಖರ ಅಜ್ಜಾ, ಸಂಗಮೇಶ ಮುರ್ಕೆ, ವಿಶ್ವನಾಥ ಡೋಣಗಾಪುರೆ, ಶಿವಾಜಿ ಆರ್.ಎಚ್. ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಜತೆಗೆ ಪುಸ್ತಕ ನೀಡಿ ಗೌರವ ಸಲ್ಲಿಸಲಾಯಿತು.