

ಬೀದರ್: ಇಲ್ಲಿನ ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ಕೊಡಮಾಡುವ ಬಿದರಿ ಉತ್ಸವ 2024ರ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿಗೆ ಖ್ಯಾತ ಚಿತ್ರನಟ ಹಾಗೂ ಹಿರಿಯ ಜನಪದ ಗಾಯಕ ಗುರುರಾಜ ಹೊಸಕೋಟೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆ ಅಧ್ಯಕ್ಷೆ, ಗಾಯಕಿ ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ.
ನಗರದಲ್ಲಿ ಸಿದ್ಧತಾ ಸಭೆ ನಡೆಸಿದ ಅವರು, ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಡಿ.14, 15ರಂದು ಆಯೋಜಿಸಿದ ಬಿದರಿ ಉತ್ಸವದಲ್ಲಿ 15 ಸಾವಿರ ನಗದು, ಬಿದರಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಈಗಾಗಲೇ ಬಿದರಿ ದತ್ತಿ ಪ್ರಶಸ್ತಿಯನ್ನು ಹಿರಿಯ ಸಂಗೀತಗಾರ ಪಂಡಿತ ವೈಕುಂಠದತ್ತ ಮಹಾರಾಜ, ವಿಶ್ವ ವಿಖ್ಯಾತ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಲತಾ ಹಂಸಲೇಖಾ ಅವರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಹಿರಿಯ ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಈಗಾಗಲೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಮಾನುಜ ಅನುಗ್ರಹ, ನೇತಾಜಿ, ಡಾ.ಅಂಬೇಡ್ಕರ್, ಶಿಶುನಾಳ ಷರೀಫ್, ಕೆಂಪೇಗೌಡ, ಪರಿಮಳ, ಬಸವ ಚೇತನ, ಕನ್ನಡ ಜ್ಯೋತಿ, ಗಾಂ ರಾಷ್ಟ್ರೀಯ ಶಾಂತಿ, ಬೆಂಗಳೂರು ರತ್ನ, ಜಾನಪದ ಗಾನಸಿರಿ, ಜಾನಪದ ಚಕ್ರವರ್ತಿ, ಜನಪದ ಬ್ರಹ್ಮ ಹಾಗೂ ಜಾನಪದ ಕೋಗಿಲೆ ಸೇರಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಡಿ.14ರಂದು ಬಿದರಿ ಉತ್ಸವದಲ್ಲಿ ಸಾಂಸ್ಕೃತಿಕ, 15ರಂದು ಬಿದರಿ ಶಹನಾಯಿ, ಬಿದರಿ ಸಂಗೀತೋತ್ಸವ ಹಾಗೂ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದು, ಪೌರಾಡಳಿತ ಸಚಿವ ರಹೀಮ್ ಖಾನ್ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಹಿರಿಯ ಕಲಾವಿದರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವ ಯಶಸ್ವಿಗೊಳಿಸಬೇಕು ಎಂದು ರೇಖಾ ಸೌದಿ ಕೋರಿದ್ದಾರೆ.