

ಬೀದರ್: ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ನಾವೆಲ್ಲರೂ ಆರೋಗ್ಯವಂತರಾಗಿರಲು ಸಾಧ್ಯ. ಹೀಗಾಗಿ ಮನೆಯಿಂದಲೇ ಶುಚಿ ಕಾರ್ಯ ಆರಂಭಿಸೋಣ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಮಿಷನ್, ಜಿಪಂ ವತಿಯಿಂದ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ಶೌಚಗೃಹ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆಯಲ್ಲಿ ದೇವರ ಕೋಣೆ ಇಲ್ಲದಿದ್ದರೂ ಶೌಚಗೃಹ ಇರುವುದು ಮುಖ್ಯವಾಗಿದೆ ಎಂದರು.
ಡಿ.10 ರವರೆಗೆ ಜಿಲ್ಲೆಯ 185 ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ನಡೆಯಲಿದೆ. ಯಾವ ಗ್ರಾಪಂ ವ್ಯಾಪ್ತಿಯ ಗ್ರಾಮ ಹೆಚ್ಚು ಸ್ವಚ್ಛತೆಗೆ ಆದ್ಯತೆ ಕೊಡುತ್ತಿರಿ ಅಂಥ ಪಂಚಾಯಿತಿಯ ಮೂರು ಗ್ರಾಮಗಳಿಗೆ ವೈಯಕ್ತಿಕ ಬಹುಮಾನ ನೀಡುತ್ತೇನೆ ಎಂದರು.
ಜಿಲ್ಲಾಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಯಲು ಮಲ ವಿಸರ್ಜನೆಯಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಶುಚಿಗೆ ಪ್ರಥಮ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಅಕ್ಕ ಪಕ್ಕದ ಮನೆಯವರಿಗೆ ತಿಳಿಸಿ ಬಯಲು ಶೌಚಮುಕ್ತ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಮಾತನಾಡಿ, ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪ್ರಗತಿ ಸಾದಿಸಲಾಗಿದ್ದು, 2,25,826 ವಯಕ್ತಿಕ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಶೌಚಗೃಹ ನಿರ್ಮಿಸುವ ಜತೆಗೆ ಬಳಕೆ ಮಾಡುವ ಕುರಿತು ಗ್ರಾಪಂಯಿಂದ ಅರಿವು ನೀಡಲಾಗಿದೆ. ಜಿಲ್ಲೆಯ 185 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಕಸ ವಿಲೇಮಾರಿ ವಾಹನ ನೀಡಲಾಗಿದ್ದು, ಪ್ರತಿ ಮನೆಗೆ ಸಹ ಹಸಿ ಕಸ, ಒಣ ಕಸ ವಿಂಗಡಿಸಲು 2 ಬುಟ್ಟಿಗಳನ್ನು ನೀಡಲಾಗಿದೆ ಎಂದರು.
ಸೆ.14ರಿಂದ ಅ.2 ರವರೆಗೆ ಸ್ವಚ್ಛತಾ ಸೇವಾ ಆಂದೋಲನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹುಮನಾಬಾದ್ ತಾಪಂ ಇಒ ದೀಪಿಕಾ ಬಿ.ನಾಯಕ್ ಹಾಗೂ ಸ್ವಚ್ಛತಾ ಸಿಪಾಯಿಗಳನ್ನು ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಗ್ರಾಮೀಣ ಕುಡಿಯುವ ನೀರು ಘಟಕದ ಕಾರ್ಯಪಾಲಕ ಅಭಿಯಂತರ್ ರಾಮಲಿಂಗಪ್ಪ ಬಿರಾದಾರ್, ಜಗನ್ನಾಥ ಮೂರ್ತಿ, ಡಾ.ಗೌತಮ ಅರಳಿ, ಪಂಡಿತ ವಾಡೇಕರ್ ಸೇರಿ ಜಿಲ್ಲೆಯ ತಾಪಂ ಇಒ, ಗ್ರಾಪಂ ಪಿಡಿಒಗಳು ಇದ್ದರು.