ಬಿಎಸ್ಎಸ್ಕೆ ಮತ್ತೆ ಆರಂಭಿಸಿ

Rait sang
Published on

ಬೀದರ್: ಜಿಲ್ಲೆಯ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ)ಯನ್ನು ಬಂದ್ ಆಗಿದ್ದು, ಅದನ್ನು ಮತ್ತೆ ಆರಂಭಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಕುರಿತು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿಪತ್ರ ಸಲ್ಲಿಸಿ, ಕಾರ್ಖಾನೆಯು ರೈತರು ಹಾಗೂ ಕಾರ್ಮಿಕರ ಉಪಜೀವನಕ್ಕೆ ಸಹಕಾರಿಯಾಗಿತ್ತು. ಸಾಲಕ್ಕೆ ಒಳಗಾಗಿ ಬಂದ್ ಆಗಿದೆ. ಸಾಲ ಮರುಪಾವತಿ ಮಾಡದ ಕಾರಣ ಕಾರ್ಖಾನೆಯನ್ನು ಡಿಸಿಸಿ ಬ್ಯಾಂಕ್ ಜಪ್ತಿ ಮಾಡಿದ್ದು, ಟೆಂಡರ್ ಕರೆದು ಅಲ್ಲಿನ ವಸ್ತುಗಳನ್ನು ಮಾರಾಟಕ್ಕೆ ಮುಂದಾಗಿದೆ. ಅದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾರ್ಖಾನೆ ಬಂದ್ ಆಗಿದ್ದ ಕಾರಣ ಅಲ್ಲಿನ ಸಿಬ್ಬಂದಿ ಹಾಗೂ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರದ ಸಹಾಯದಿಂದ ಅಥವಾ ಗುತ್ತಿಗೆ ಆಧಾರದ ಮೇಲೆ ಕಾರ್ಖಾನೆಯನ್ನು ಮತ್ತೆ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಎಸ್ಎಸ್ಕೆಯಂತೆ ಬರುವ ದಿನಗಳಲ್ಲಿ ಎನ್ಎಸ್ಎಸ್ಕೆ ಮತ್ತು ಎಂಜಿಎಸ್ಎಸ್ಕೆ ಸಹ ಮುಚ್ಚಿದರೆ ಜಿಲ್ಲೆಯ ರೈತರು ಕಬ್ಬು ಎಲ್ಲಿಗೆ ಸಾಗಿಸಬೇಕು? ರೈತರು, ಕಾರ್ಮಿಕರ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲ ಕಾರ್ಖಾನೆಗಳನ್ನು ಬಂದ್ ಆಗದಂತೆ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಪ್ರಮುಖರಾದ ನಾಗಯ್ಯಾ ಸ್ವಾಮಿ, ಪ್ರಕಾಶ ಬಾವಗೆ, ಶಂಕ್ರೆಪ್ಪ ಪಾರಾ, ಧೂಳಪ್ಪ ಆಣದೂರ, ಬಸಪ್ಪ ಆಲೂರೆ, ಮಲ್ಲಿಕಾರ್ಜುನ ಚಕ್ಕಿ, ಸುಮಂತ ಗ್ರಾಮಲೆ, ಬಾಬುರಾವ ಬೆಟ್ಟದ, ಶಿವಾನಂದ ಹುಡಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net