ಕೊಳಾರ(ಬಿ): ನಿರಂತರ ನೀರು ಸರಬರಾಜು ಗ್ರಾಮ

Kolar
Published on

ಬೀದರ್: ತಾಲ್ಲೂಕಿನ ಕಪಲಾಪುರ (ಎ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಾರ(ಬಿ) ಈಗ ನಿರಂತರ ನೀರು ಸರಬರಾಜು ಗ್ರಾಮವಾಗಿದೆ.

ಗ್ರಾಮದಲ್ಲಿ ಸೋಮವಾರ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ವಿಶ್ವ ಬ್ಯಾಂಕ್ ಮತ್ತು ಫೀಡ್ ಬ್ಯಾಕ್ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ ಅವರು ಜಂಟಿಯಾಗಿ ಗ್ರಾಮವನ್ನು ನಿರಂತರ ನೀರು ಸರಬರಾಜು ಗ್ರಾಮವೆಂದು ಘೋಷಣೆ ಮಾಡಿದರು.

ಜಲ ಜೀವನ ಮಿಷನ್ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಯೋಜನೆ ಮೂಲಕ ಕೊಳಾರ(ಬಿ) ಗ್ರಾಮ ನಿರಂತರ ನೀರು ಸರಬರಾಜು ಗ್ರಾಮವಾಗಿದೆ ಎಂದು ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ಗ್ರಾಮದ ಜನ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ನೀರು ಪೋಲಾಗದಂತೆ ಎಚ್ಚರ ವಹಿಸಬೇಕು. ಸಕಾಲಕ್ಕೆ ನೀರಿನ ಕರ ಪಾವತಿಸಬೇಕು ಎಂದು ತಿಳಿಸಿದರು.

ಕೊಳಾರ(ಬಿ) ದಿನದ 24 ಗಂಟೆ ನೀರು ಪೂರೈಕೆಯಾಗುವ ಜಿಲ್ಲೆಯ ಮೊದಲ ಹಾಗೂ ರಾಜ್ಯದ ಎರಡನೇ ಗ್ರಾಮವಾಗಿದೆ. ಗ್ರಾಮಸ್ಥರು ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದು ಡಾ. ಗಿರೀಶ್ ದಿಲೀಪ್ ಬದೋಲೆ ಹೇಳಿದರು.

ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ನಿರಂತರ ನೀರು ಸರಬರಾಜು ಗ್ರಾಮಗಳ ಘೋಷಣೆ ಮಾಡಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರರಿಗೆ ಸೂಚನೆ ನೀಡಿದರು.

ಗ್ರಾಮದಲ್ಲಿ ಜನರಿಗೆ ಇನ್ನು ನಲ್ಲಿ ಮೂಲಕ ನಿರಂತರ ನೀರು ಸಿಗಲಿದೆ. ನಿತ್ಯ ನೀರಿನ ಶುದ್ಧೀಕರಣ ಆಗಲಿದೆ ಎಂದು

ವಿಶ್ವಬ್ಯಾಂಕ್‍ನ ಫೀಡ್ ಬ್ಯಾಕ್ ಫೌಂಡೇಷನ್ ರಾಜ್ಯ ಯೋಜನಾಧಿಕಾರಿ ಡಾ. ನಂದಕುಮಾರ ತಾಂದಳೆ ತಿಳಿಸಿದರು.

ನಿರಂತರ ನೀರು ಸೌಲಭ್ಯದ ನಿರ್ವಹಣೆ, ಶುಲ್ಕ ಇತ್ಯಾದಿ ವಿಷಯಗಳ ಮಾಹಿತಿಯನ್ನೂ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಶುರಾಮ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ ಶೇಕಳೆ, ಜಲ ಜೀವನ ಮಿಷನ್ ಜಿಲ್ಲಾ ಯೋಜನಾ ಅಧಿಕಾರಿ ಪೆಟ್ರು, ಪಿಡಿಒ ಧನರಾಜ ಮತ್ತಿತರರು ಇದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂಜೀವಕುಮಾರ ಮಾಶೆಟ್ಟಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net