

ಬೀದರ್: ನಗರದ ವಾರ್ಡ್ ಸಂಖ್ಯೆ 34 ರ ವ್ಯಾಪ್ತಿಯ ಪಕ್ಕಲವಾಡದಲ್ಲಿ ಸರ್ಕಾರದಿಂದ ಮಂಜೂರಾದ ಮನೆಗಳು ಪೂರ್ಣಗೊಳ್ಳದ ಕಾರಣ ಫಲಾನುಭವಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಫಿಲೋಮನ್‍ರಾಜ್ ಪ್ರಸಾದ್ ತಿಳಿಸಿದ್ದಾರೆ.
ಪಕ್ಕಲವಾಡ ಕೊಳಚೆ ಪ್ರದೇಶವಾಗಿದ್ದು, ಇಲ್ಲಿ ಬಹುತೇಕ ಬಡವರೇ ವಾಸಿಸುತ್ತಾರೆ. ಕಾಲೊನಿಯ ಅನೇಕರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಇತರ ಯೋಜನೆಯಲ್ಲಿ ಮನೆಗಳು ಮಂಜೂರಾಗಿವೆ. ಫಲಾನುಭವಿಗಳು ಹೊಸ ಮನೆ ಕಟ್ಟಲು ಕಚ್ಚಾ ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಆದರೆ, ಸಂಬಂಧಪಟ್ಟವರು ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಕೈಬಿಟ್ಟಿರುವುದರಿಂದ ಆರು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಮಂಜೂರಾದ ಮನೆಗಳ ಪೈಕಿ ಅನೇಕವು ಆರ್.ಸಿ.ಸಿ. ವರೆಗೆ ನಿರ್ಮಾಣಗೊಂಡಿವೆ. ಕೆಲವು ಲೆಂಟಲ್ ವರೆಗೆ, ಇನ್ನು ಕೆಲವು ಬೇಸ್‍ಮೆಂಟ್ ವರೆಗೆ ಪೂರ್ಣಗೊಂಡಿವೆ. ಕೆಲ ಮನೆಗಳ ನಿರ್ಮಾಣ ಕಾಮಗಾರಿ ಈವರೆಗೆ ಆರಂಭವೇ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆ ಮಂಜೂರಾದ ಫಲಾನುಭವಿಗಳು ಸರ್ಕಾರದ ನಿಗದಿತ ಶುಲ್ಕವನ್ನು ಡಿಡಿ ಮೂಲಕ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಗೆ ಸಂದಾಯ ಮಾಡಿದ್ದಾರೆ. ಕಾರ್ಮಿಕರ ಗುರುತಿನ ಚೀಟಿ ಹೊಂದಿದವರು ಶುಲ್ಕದಿಂದ ವಿನಾಯಿತಿ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರೂ ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಆಡಳಿತ ಕೂಡಲೇ ಸರ್ಕಾರದಿಂದ ಮಂಜೂರಾದ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಬಡ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.