

ಬೀದರ್: ರಾಷ್ಟ್ರ ರಕ್ಷಣಾ ಪಡೆಯ ರಾಜ್ಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಅವರ ವಿರುದ್ಧ ಸುಳ್ಳು ಆರೋಪ ಹೊರೆಸಿ ಪ್ರಕರಣ ದಾಖಲಿಸಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ಆಪ್ತ ಸಹಾಯಕ ಬಿ.ಎಸ್. ಅಶೋಕ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾ ಘಟಕ ಒತ್ತಾಯಿಸಿದೆ.
ಪಡೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದ ವೇಳೆ ಜಮೀರ್ ಅಹಮ್ಮದ್ ಖಾನ್ ಅವರು ಮೈಬಣ್ಣ ಕುರಿತು ಹೇಳಿಕೆ ಕೊಟ್ಟು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅವಹೇಳನ ಮಾಡಿದ್ದು, ಹಿಂದೂ ಕಾರ್ಯಕರ್ತರು ಹಾಗೂ ಕುಮಾರಸ್ವಾಮಿ ಅವರ ಅಭಿಮಾನಿಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಹೇಳಿದರು.
ಜಮೀರ್ ಅಹಮ್ಮದ್ ಖಾನ್ ಅವರ ಹೇಳಿಕೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ವಿರೋಧಿಸಿದ್ದಕ್ಕೆ ಪುನೀತ್ ಕೆರೆಹಳ್ಳಿ ಅವರ ವಿರುದ್ಧ ಹುಸಿ ಪ್ರಕರಣ ದಾಖಲಿಸಲಾಗಿದೆ ಎಂದು ಆಪಾದಿಸಿದರು.
ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾ ಘಟಕದ ಅಧ್ಯಕ್ಷ ಅಮಿತ್ ಚಿಂಚೋಳೆ, ಉಪಾಧ್ಯಕ್ಷರಾದ ನಾಗರಾಜ ಗೊಂಡ, ಸಂತೋಷ ಮಡಿಕೆ, ಸಂಘಟನಾ ಕಾರ್ಯದರ್ಶಿ ಅನಿಲ್ ಜಾಧವ್, ಕಾರ್ಯದರ್ಶಿ ನಿಖಿಲ್ ಚೌಂಡೇಕರ್, ಜಂಟಿ ಕಾರ್ಯದರ್ಶಿ ಸೋಮನಾಥ ಜ್ಯಾಂತೆ, ಸದಸ್ಯರಾದ ಗೋಪಾಲ್ ಚೌಹಾಣ್, ಮುಕೇಶ್ ಜಾಧವ್, ಅಭಿಷೇಕ ಅಷ್ಟೂರ, ಪ್ರಭುಕಾಂತ ಸಿಗ್ಗಿ, ಸುಧಾಕರ ಬಚರೆ, ಅಜಯ ನಾಗವಂಶಿ ಇದ್ದರು.