ನೌಕರರ ಭವನ ಹೈಟೆಕ್ ಆಗಿಸುವೆ

Rajendrakumar Gandge-2
Published on

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಜಿಲ್ಲೆಯ ನೌಕರರು ಮತ್ತೊಂದು ಅವಧಿಗೆ ಅವಕಾಶ ನೀಡಿದರೆ ಪ್ರತಾಪನಗರದ ನೌಕರರ ಭವನವನ್ನು ಹೈಟೆಕ್ ಭವನವಾಗಿಸುವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರೂ ಆದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಭರವಸೆ ನೀಡಿದರು.

ಹೈಟೆಕ್ ಭವನದ ಯೋಜನೆ ರೂ. 4 ಕೋಟಿಯದ್ದಾಗಿದೆ. ಸದ್ಯದ ಭವನವನ್ನು ಸಂಪೂರ್ಣ ಹವಾನಿಯಂತ್ರಿತಗೊಳಿಸುವುದು, ನೂತನ ಸಭಾ ಭವನ, ವಿಶಾಲ ತರಬೇತಿ ಕೋಣೆ, ತೆರೆದ ರಂಗ ಮಂದಿರ, 10 ಅತಿಥಿ ಗೃಹಗಳ ನಿರ್ಮಾಣ ಹೈಟೆಕ್ ಭವನದ ಯೋಜನೆಗಳಲ್ಲಿ ಸೇರಿವೆ ಎಂದು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ಅವಧಿಗಳಲ್ಲಿ ನೌಕರರ ಭವನದ ಚಿತ್ರಣವನ್ನೇ ಬದಲಿಸಲಾಗಿದೆ. ರೂ. 1 ಕೋಟಿ ವೆಚ್ಚದಲ್ಲಿ 15 ಸಾವಿರ ಚದರ್ ಅಡಿಯ ಡೈನಿಂಗ್ ಹಾಲ್, ರೂ. 11 ಲಕ್ಷ ವೆಚ್ಚದಲ್ಲಿ ಶೌಚಾಲಯ, ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಸವರಾಜ ಭರಶೆಟ್ಟಿ ಅವರ ಹೆಸರಲ್ಲಿ ರೂ. 5 ಲಕ್ಷ ವೆಚ್ಚದ ಹೈಟೆಕ್ ಸಭಾ ಭವನ, ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಿಸಲಾಗಿದೆ. ರೂ. 11 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ರೂ. 20 ಲಕ್ಷ ವೆಚ್ಚದಲ್ಲಿ ಸಭಾಂಗಣದ ನವೀಕರಣ ಮಾಡಲಾಗಿದೆ ಎಂದು ಹೇಳಿದರು.

ನಗರದ ಪನ್ನಾಲಾಲ್ ಹೀರಾಲಾಲ್ ಕಾಲೇಜು ಎದುರಿನ ರೂ. 2 ಕೋಟಿ ಬೆಲೆ ಬಾಳುವ 40* 60 ಚದರ್ ಅಡಿಯ ಸಂಘದ ಜಾಗವನ್ನು ಕಾನೂನು ಹೋರಾಟದ ಮೂಲಕ ಉಳಿಸಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಸಂಘದ ಪರವಾಗಿ ತೀರ್ಪು ಬಂದಿದ್ದು, ಈ ಸ್ಥಳದಲ್ಲಿ ನಾಲ್ಕು ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಿಸುವ ಉದ್ದೇಶ ಇದೆ ಎಂದು ತಿಳಿಸಿದರು.

ಕಟ್ಟಡದಲ್ಲಿ ಸಭಾಭವನ, ಮಹಿಳಾ- ಪುರುಷ ನೌಕರರಿಗೆ ಪ್ರತ್ಯೇಕ ಜಿಮ್, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೋಣೆ, ನೌಕರರ ವಾಸ್ತವ್ಯಕ್ಕೆ 10 ಕೋಣೆ, ಗ್ರಂಥಾಲಯ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಹೇಳಿದರು.

ಎನ್‍ಪಿಎಸ್ ರದ್ದುಪಡಿಸಿ, ಒಪಿಎಸ್ ಮರು ಜಾರಿಗೊಳಿಸುವುದು, ನೌಕರರಿಗೆ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಕಲ್ಪಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ, ವಿವಿಧ ಇಲಾಖೆಗಳ ವೃಂದ ನೇಮಕಾತಿ ನಿಯಮಗಳ ತಿದ್ದುಪಡಿಗೆ ಹೋರಾಟ ನಡೆಸಲಾಗುವುದು. ನೌಕರರ ಹಿತ ರಕ್ಷಿಸಲಾಗುವುದು ಎಂದು ತಿಳಸಿದರು.

ನೌಕರರ ಆಶಯಕ್ಕೆ ಅನುಗುಣವಾಗಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಸಾಕಷ್ಟು ಉತ್ತಮ ಕಾರ್ಯಗಳನ್ನು ಕೈಗೊಂಡಿರುವ ಸಂತೃಪ್ತಿ ಇದೆ. ನೌಕರರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಹೋರಾಟ ನಡೆಸಲಾಗಿದೆ. ನೌಕರರ ಸಮಸ್ಯೆ-ಸವಾಲುಗಳ ಚಿಂತನ ಮಂಥನಕ್ಕೆ ಜಿಲ್ಲಾಮಟ್ಟದ ನೌಕರರ ಸಮ್ಮೇಳನಗಳನ್ನು ನಡೆಸಿಕೊಂಡು ಬರಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ವರ್ಷ ಅಧಿಕಾರಿಗಳು ಹಾಗೂ ನೌಕರರ ಕುಂದು ಕೊರತೆ ಜಂಟಿ ಸಮಾಲೋಚನಾ ಸಭೆ ನಡೆಸಲಾಗಿದೆ ಎಂದು ಹೇಳಿದರು.

ಭಾಲ್ಕಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಬಸವಕಲ್ಯಾಣದಲ್ಲಿ ಶಾಸಕ ಶರಣು ಸಲಗರ ಅವರ ಸಹಕಾರದಿಂದ ಸಂಘದ ತಾಲ್ಲೂಕು ಕಚೇರಿಗಳನ್ನು ಆರಂಭಿಸಲಾಗಿದೆ. ಕೆಜಿಐಡಿ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಆಡಳಿತದ ಮೇಲೆ ಒತ್ತಡ ತರಲಾಗಿದೆ. ಆಡಳಿತದ ಸಹಯೋಗದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟಗಳನ್ನು ಸಂಘಟಿಸಲಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನೌಕರರನ್ನು ಸತ್ಕರಿಸಿ ಪ್ರೋತ್ಸಾಹಿಸಲಾಗಿದೆ ಎಂದು ತಿಳಿಸಿದರು.

ನೌಕರರ ಮನವೊಲಿಸಿ ಪುಣ್ಯಕೋಟಿ ಯೋಜನೆಗೆ ರೂ. 1 ಕೋಟಿ ಸಂಗ್ರಹಿಸಿ ದೇಣಿಗೆ ಕೊಡಲಾಗಿದೆ. ಐದು ವರ್ಷಗಳ ಅವಧಿಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಒಂದು ಸಾವಿರ ನೌಕರರ ಮಕ್ಕಳಿಗೆ ತಲಾ ರೂ. 1 ಸಾವಿರ ಪ್ರೋತ್ಸಾಹ ಧನದೊಂದಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗಿದೆ. ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ಹಾಸ್ಯ ಸಂಜೆ ನಡೆಸಲಾಗಿದೆ ಎಂದು ಹೇಳಿದರು.

ಸರ್ಕಾರದ ಮೇಲೆ ಒತ್ತಡ ತಂದು ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಘ ಯಶ ಕಂಡಿದೆ. ನೌಕರರ ಹಿತಕ್ಕೆ ಪೂರಕವಾಗಿ ಇನ್ನೂ ಅನೇಕ ಕಾರ್ಯಗಳನ್ನು ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಇದ್ದರು.

ಗಂದಗೆ ಪೆನಲ್‍ನ 23 ಅಭ್ಯರ್ಥಿಗಳ ಆಯ್ಕೆ

ಜಿಲ್ಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಒಟ್ಟು 66 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಪೈಕಿ ಈಗಾಗಲೇ 36 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇದರಲ್ಲಿ ಸಂಘದ ಜಿಲ್ಲಾ ಘಟಕದ ಹಾಲಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಪೆನಲ್‍ನ 23 ಮಂದಿ  ಆಯ್ಕೆಯಾಗಿದ್ದಾರೆ.

ಉಳಿದ 30 ಸ್ಥಾನಗಳಿಗೆ ನವೆಂಬರ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರ ವರೆಗೆ ಚುನಾವಣೆ ಜರುಗಲಿದೆ. ಬಳಿಕ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ರಾಜೇಂದ್ರಕುಮಾರ ಗಂದಗೆ ತಿಳಿಸಿದರು.

ಚುನಾವಣೆ ನಡೆಯಲಿರುವ 30 ಸ್ಥಾನಗಳಲ್ಲೂ ತಮ್ಮ ಪೆನಲ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ವಿಶ್ವಾಸ ಇದೆ ಎಂದು ಹೇಳಿದರು.

ಮತದಾನದಲ್ಲಿ ಪಾಲ್ಗೊಳ್ಳುವ ಸರ್ಕಾರಿ ನೌಕರರಿಗೆ ಆಡಳಿತ ಎರಡು ಗಂಟೆಯ ಒಒಡಿ ಸೌಲಭ್ಯ ಕಲ್ಪಿಸಿದೆ. ನೌಕರರು ಇದರ ಪ್ರಯೋಜನ ಪಡೆಯಬೇಕು. ಮತದಾನಕ್ಕೆ ಬರುವಾಗ ಇಲಾಖೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಸಂಘ ಹಾಗೂ ನೌಕರರ ಹಿತಕ್ಕಾಗಿ ತಮ್ಮ ಪೆನಲ್ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net