ಬೇಡಿಕೆ ಇರುವ ವೃತ್ತಿಗಳ ತರಬೇತಿ ನೀಡಿ

ceo meeting - Copy
Published on

ಬೀದರ್: ಡಿಸಿಸಿ ಬ್ಯಾಂಕ್ ಸಂಚಾಲಿತ ಶಾರದಾ ಆರ್‍ಸೆಟಿ ಸಂಸ್ಥೆಯು ನಿರುದ್ಯೋಗಿ ಯುವಕ, ಯುವತಿಯರಿಗೆ ಅತ್ಯುತ್ತಮ ತರಬೇತಿ ನೀಡುತ್ತಿದೆ. ಟೈಲರಿಂಗ್, ಬ್ಯೂಟಿಪಾರ್ಲರ್‍ನಂತಹ ಸಾಂಪ್ರದಾಯಿಕ ತರಬೇತಿಗಳ ಜತೆಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವ, ಬೇಡಿಕೆ ಇರುವ ಕೌಶಲ್ಯ ತರಬೇತಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗಿರೀಶ ಬದೋಲೆ ಹೇಳಿದರು.

ನಗರದ ಪ್ರತಾಪನಗರದಲ್ಲಿರುವ ಶಾರದಾ ಆರ್‍ಸೆಟಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಎರಡನೇ ತ್ರೈಮಾಸಿಕ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸುಲಭವಾಗಿ ಉದ್ಯೋಗ ದೊರಕಿಸಿಕೊಡಬಹುದಾದ ವೃತ್ತಿಗಳಿಗೆ ಆದ್ಯತೆ ನೀಡಬೇಕು. ಬದಲಾವಣೆಗೆ ಅನುಗುಣವಾಗಿ ಹೆಚ್ಚು ಬೇಡಿಕೆ ಇರುವ ಮತ್ತು ಉದ್ಯಮಗಳು ಬಯಸುವ ವೃತ್ತಿಗಳ ಕುರಿತು ತರಬೇತಿ ಕೊಡಬೇಕು ಎಂದು ತಿಳಿಸಿದರು.

ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸಭೆಯಲ್ಲಿದ್ದ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇತರ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಸಂಸ್ಥೆಯಲ್ಲಿ ಲಭ್ಯವಿರುವ ತರಬೇತಿ ಮತ್ತಿತರ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು. ಪೋಸ್ಟರ್, ಭಿತ್ತಿಪತ್ರಗಳನ್ನು ಎಲ್ಲೆಡೆ ಅಂಟಿಸಬೇಕು. ಗ್ರಾಮ ಮಟ್ಟದಲ್ಲಿ ಪ್ರಚಾರ ನಡೆದಲ್ಲಿ ನಿರುದ್ಯೋಗಿ ಯುವಕ, ಯುವತಿಯರಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ  ನಿರುದ್ಯೋಗಿ ಯುವಕ, ಯುವತಿಯರನ್ನು ಗುರುತಿಸಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಶಾರದಾ ಆರ್‍ಸೆಟಿ ಸಂಸ್ಥೆಯ ನಿರ್ದೇಶಕ ಬಿ. ಶಿವಪ್ರಸಾದ್ ಅವರು  ಪಿಪಿಟಿ ಮೂಲಕ ಸಂಸ್ಥೆಯ ಪ್ರಗತಿ ವರದಿ ಪ್ರಸ್ತುತಪಡಿಸಿದರು.

ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಜಿಪಂ ಯೋಜನಾ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರು, ನಬಾರ್ಡ್ ಜಿಲ್ಲಾ ಮಟ್ಟದ ಅಭಿವೃದ್ಧಿ ಅಧಿಕಾರಿ, ಲೀಟ್ ಬ್ಯಾಂಕ್ ವ್ಯವಸ್ಥಾಪಕರು, ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರು, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ, ಸರ್ಕಾರಿ ಐಟಿಐ ಪ್ರಾಚಾರ್ಯರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net