

ಬೀದರ್: ಸಾರ್ವಜನಿಕರು ಅಂಚೆ ಇಲಾಖೆಯ ವಿವಿಧ ಯೋಜನೆಗಳ ಲಾಭ ಪಡೆಯಬೇಕು ಎಂದು ಬೀದರ್ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ ಹೇಳಿದರು.
ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂಚೆ ಇಲಾಖೆಯ ಜನ ಸಂಪರ್ಕ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲಾಖೆಯಲ್ಲಿ ಮಕ್ಕಳಿಂದ ವೃದ್ಧರವರೆಗೆ ಅನೇಕ ಉಪಯುಕ್ತ ಯೋಜನೆಗಳು ಇವೆ ಎಂದು ತಿಳಿಸಿದರು.
ಇಲಾಖೆ ಒಂದೇ ಸೂರಿನಡಿ ಗ್ರಾಹಕರಿಗೆ ಹಲವು ಸೇವೆಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.
ಅಂಚೆ ಇಲಾಖೆಯ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಒದಗಿಸಲು ಜನ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ನುಡಿದರು.
ಅಭಿಯಾನದಲ್ಲಿ ದಾಖಲೆ ಸರಿಪಡಿಸಿಕೊಳ್ಳುವಿಕೆ, ಹೊಸ ಖಾತೆ ತೆರೆಯುವಿಕೆ, ಜೀವ ವಿಮೆ ಮೊದಲಾದ ಸೌಲಭ್ಯಗಳು ಸಿಗಲಿವೆ ಎಂದು ಹೇಳಿದರು.
ಅಂಚೆ ಇಲಾಖೆಯ ವಿವಿಧ ಜೀವ ವಿಮೆ ಯೋಜನೆಗಳ ಕುರಿತು ಅಂಚೆ ವಿಮೆ ಅಭಿವೃದ್ಧಿ ಅಧಿಕಾರಿ ಚಿದಾನಂದ ಕಟ್ಟಿ ಮಾಹಿತಿ ನೀಡಿದರು.
ಗ್ರಾಮದ 182 ಮಂದಿ ಅಂಚೆ ಇಲಾಖೆಯ ಹೊಸ ಉಳಿತಾಯ ಖಾತೆ ತೆರೆದರು. 52 ಜನ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಂಡರು.
ಶಾಖಾ ಅಂಚೆ ಪಾಲಕ ಸಂಗಮೇಶ, ವಿಶ್ವ, ಶರಣು, ಅನಂತ, ವಿಜಯಕುಮಾರ, ಜಯಶ್ರೀ, ಜಗನ್ನಾಥ ಮಾಣಿಕ, ವಿವೇಕ್ ಮತ್ತಿತರರು ಇದ್ದರು.