

ಬೀದರ್: ಮುಂಗಾರು ಹಂಗಾಮಿನ ಪ್ರಮುಖ ದೀರ್ಘಾವಧಿ ಬೆಳೆ ತೊಗರಿಗೆ ಜಿಲ್ಲೆಯ ವಿವಿಧೆಡೆ ಎಲೆಚುಕ್ಕೆ ರೋಗ ಕಂಡುಬಂದಿದ್ದು, ನಿರ್ವಹಣೆಗೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಭಾಲ್ಕಿ, ಹುಮನಾಬಾದ್, ಚಿಟಗುಪ್ಪ, ಕಮಲನಗರ, ಬಸವಕಲ್ಯಾಣ, ಔರಾದ್ ಮತ್ತು ಬೀದರ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದ ವೇಳೆ ರೋಗ ಪತ್ತೆಯಾಗಿದೆ.
ತೊಗರಿಗೆ ಅಂಟಿದ ಎಲೆಚುಕ್ಕೆ ರೋಗ ಆರ್ಥಿಕ ನಷ್ಟ ರೇಖೆಗೆ ತಲುಪುವ ಹಂತದಲ್ಲಿದೆ. ಇದಕ್ಕೆ ಪೂರಕವಾಗಿ ನಾಲ್ಕೈದು ದಿನಗಳಿಂದ ಬೆಳಗ್ಗೆ ಮಂಜು ವಾತಾವರಣ ಇರುವುದರಿಂದ ರೋಗದ ತೀವ್ರ ಹೆಚ್ಚಾಗಿದೆ. ಸಣ್ಣ ಗೋಲಾಕಾರದ ಕಂದು ಬಣ್ಣದ ಚುಕ್ಕೆಗಳು ತೊಗರಿ ಎಲೆ ಮೇಲೆ ಕಂಡುಬರುತ್ತಿವೆ. ನಂತರ ಈ ಚುಕ್ಕೆಗಳು ಸಂಖ್ಯೆ ಮತ್ತು ಗಾತ್ರದಲ್ಲಿ ಬೆಳೆದು ಒಂದನ್ನೊಂದು ಕೂಡಿಕೊಂಡು ಎಲೆಯ ಬಹು ಭಾಗ ಅವರಿಸಲಿವೆ. ರೋಗ ತೀವ್ರವಾದಂತೆ ಎಲೆಗಳೆಲ್ಲ ಉದುರಿ ಗಿಡ ಬೋಳಾಗಿ ಕಾಣುತ್ತದೆ.
ಸಾಮಾನ್ಯವಾಗಿ ಹಳೆಯ ಎಲೆಗಳ ಮೇಲೆ ರೋಗದ ತೀವ್ರತೆ ಹೆಚ್ಚು ಕಂಡುಬರುತ್ತದೆ. ತಂಪು ವಾತಾವರಣದಲ್ಲಿ ಎಲೆ ಮತ್ತು ಹೂಗಳು ಸಹ ರೋಗಕ್ಕೆ ತುತ್ತಾಗಿ ಗಿಡದಿಂದ ಉದುರುತ್ತವೆ. ಸರ್ಕೊಸ್ಪೊರಾ ಎಲೆಚುಕ್ಕೆ ರೋಗ ಎಂದು ಕರೆಯಲ್ಪಡುವ ಈ ಬಾಧೆ ಝಾಂಥೊಮೊನಾಸ್ ಕ್ಯಾಂಪೆಸ್ಟ್ರಿಸ್ ತಳಿಯ ಕ್ಯಾಜನಿ ಎನ್ನುವ ದುಂಡಾಣುವಿನಿಂದ ಉಂಟಾಗುತ್ತದೆ ಎಂದು ಸಮೀಕ್ಷೆ ತಂಡದಲ್ಲಿನ ಹಿರಿಯ ಕೃಷಿ ವಿಜ್ಞಾನಿಗಳೂ ಆದ ಕೆವಿಕೆ ಮುಖ್ಯಸ್ಥ ಡಾ.ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ.
ಎಲೆಚುಕ್ಕೆ ರೋಗ ಕಂಡು ಬಂದಲ್ಲಿ ನಿರ್ವಹಣೆಗಾಗಿ ಕಾರ್ಬನ್ಡೈಜಿಮ್ ಒಂದು ಗ್ರಾಂ ಅಥವಾ ಹೆಕ್ಸಾಕೊನೊಝೊಲ್ ಒಂದು ಮಿಲೀ ಅಥವಾ ಕಾರ್ಬನ್ಡೈಜಿಮ್+ ಮ್ಯಾಂಕೋಜೆಬ್ ಸಂಯುಕ್ತ ಶೀಲಿಂದ್ರನಾಶಕ ಜತೆಗೆ 0.5 ಮಿಲೀ ಎನ್ಎಎ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಜೋಳದಲ್ಲಿ ಕೆಲವೆಡೆ ಸುಳಿತಿಗಣೆ ಬಾಧೆ ಕಂಡುಬಂದಿದ್ದು, ನಿರ್ವಹಣೆಗಾಗಿ ಕಾರ್ಬೋಫ್ಯೊರಾನ್ ಶೇ.3ರ ಹರಳುಗಳನ್ನು ಜೋಳದ ಸುಳಿಗಳಲ್ಲಿ ಹಾಕಬೇಕು. ಮಾಹಿತಿಗಾಗಿ ಸಮೀಪದ ಕೃಷಿ ಅಧಿಕಾರಿಗಳು ಅಥವಾ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಬೇಕು.
ಸಮೀಕ್ಷೆ ತಂಡದಲ್ಲಿ ಕೆವಿಕೆ ವಿಜ್ಞಾನಿ ಡಾ.ಜ್ಞಾನದೇವ ಬುಳ್ಳಾ, ಹುಮನಾಬಾದ್ ಸಹಾಯಕ ಕೃಷಿ ನಿರ್ದೇಶಕ ಡಾ.ಶರಣಕುಮಾರ, ರಾಜಕುಮಾರ ಎಖೇಳ್ಳಿ, ಗಿರೀಶ್, ನಿಲಾಂಬಿಕಾ ಹಾಗೂ ರೈತರು ಇದ್ದರು.
ಕಾಯಿಕೊರಕ ಕೀಟ ಕಾಟ
ಜಿಲ್ಲೆಯ ಕೆಲವೆಡೆ ತೊಗರಿ ಮತ್ತು ಕಡಲೆ ಬೆಳೆ ಹೊಲಗಳಲ್ಲಿ ಹಸಿರು ಕಾಯಿಕೊರಕ ಕೀಟದ ತತ್ತಿ ಮತ್ತು ಮರಿ ಹುಳುಗಳು ಕಂಡುಬಂದಿದ್ದು, ಆರ್ಥಿಕ ನಷ್ಟ ರೇಖೆಗಿಂತ ಕಡಿಮೆ ಇವೆ. ಹೀಗಾಗಿ ಇವುಗಳ ನಿರ್ವಹಣೆಗೆ ಯಾವುದೇ ಸಿಂಪಡಣೆಯ ಅವಶ್ಯಕತೆ ಇರುವುದಿಲ್ಲ. ಆದರೂ ರೈತರು ತಮ್ಮ ಕ್ಷೇತ್ರದಲ್ಲಿ ಕಾಯಿಕೊರಕ ಕೀಟ ಕಂಡರೆ ತತ್ತಿ ಕೀಟನಾಶಕಗಳಾದ ಎರಡು ಮಿಲೀ ಪ್ರೋಪೆನೊಫಾಸ್ 50 ಇಸಿ ಅಥವಾ 0.6 ಗ್ರಾಂ ಥೈಯೋಡಿಕಾಬರ್೯ 75 ಡಬ್ಲ್ಯುಪಿ ಜತೆಗೆ 0.5 ಮಿಲೀ ಎನ್ಎಎ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಕೆವಿಕೆ ಮುಖ್ಯಸ್ಥ ಡಾ.ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ.