

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿಷ್ಕಾಳಜಿಯಿಂದ ಜಿಲ್ಲಾಡಳಿತ ನಿಷ್ಕ್ರಿಯಗೊಂಡಿದೆ ಎಂದು ಜನರ ಧ್ವನಿ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಅಂಕುಶ ಗೋಖಲೆ ಆರೋಪಿಸಿದರು.
ಜಿಲ್ಲೆಯಲ್ಲಿ ಅಟ್ರಾಸಿಟಿ ಕೇಸ್ ಗೆ ಕವಡೆ ಕಿಮ್ಮತ್ತಿಲ್ಲ. ಇತ್ತೀಚೆಗೆ ಕೊಪ್ಪಳ ಜಿಲ್ಲೆ ಮರಕುಂಬಿ ಗ್ರಾಮದಲ್ಲಿ 98 ಜನರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದ್ದರಿಂದ ಎಲ್ಲರಿಗೂ ಜೀವಾವಧಿ ಶಿಕ್ಷೆಯಾಗಿದೆ. ಆದರೆ ಜಿಲ್ಲೆಯಲ್ಲಿ ದಲಿತರ ಮೇಲೆ ಅನೇಕ ದೌರ್ಜನ್ಯ ಪ್ರಕರಣಗಳು ನಡೆದರೂ ಯಾವುದೇ ಕ್ರಮ ಕೈಗೊಳ್ಳದೆ ಜಿಲ್ಲಾಡಳಿತ ದಿವ್ಯ ಮೌನ ವಹಿಸಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
2023ರ ಏಪ್ರಿಲ್ ನಲ್ಲಿ ಭಾಲ್ಕಿ ತಾಲೂಕಿನ ಮಳಚಾಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂದರ್ಭದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯಿತು. ಈವರೆಗೂ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ತಳವಾಡ(ಕೆ) ಗ್ರಾಮದಲ್ಲಿ ಸವರ್ಣೀಯರು ದಲಿತ ವ್ಯಕ್ತಿಗೆ ಜಾತಿನಿಂದನೆ, ರಾಚಪ್ಪಗೌಡಗಾಂವದಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ, ಮರೂರು ಗ್ರಾಮದ ದಲಿತರೊಬ್ಬರ ಜಮೀನು ಕಬಳಿಸಿದ್ದು, ಇತ್ತೀಚೆಗೆ ಚಳಕಾಪುರದಲ್ಲಿ ಸವರ್ಣೀಯರು ದಲಿತರ ಓಣಿಗಳಿಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಆದರೆ ಯಾವೊಂದು ಪ್ರಕರಣದಲ್ಲಿ ಅಟ್ರಾಸಿಟಿ ಕೇಸ್ನಡಿ ಶಿಕ್ಷೆ ಆಗದಿರುವುದು ದೌರ್ಭಾಗ್ಯ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ದಲಿತರ ಮೇಲೆ ಇಷ್ಟೆಲ್ಲ ಘಟನೆ ನಡೆದರೂ ಸಚಿವ ಖಂಡ್ರೆ ಸಂತ್ರಸ್ತರ ಮನೆಗಳಿಗೆ ಹೋಗಿ ಸಾಂತ್ವನ ಹೇಳದೆ ತಮ್ಮ ಮನೆಗೆ ಕರೆಸಿ ಸಮಾಧಾನ ಪಡಿಸುತ್ತಿರುವುದು ಎಷ್ಟು ಸರಿ? ಎಲ್ಲ ಘಟನೆಗಳಲ್ಲಿ ಅಟ್ರಾಸಿಟಿ ಕೇಸ್ ಆಗದಂತೆ ಸಂಚು ರೂಪಿಸಿದ್ದು ಭಾಲ್ಕಿ ಡಿವೈಎಸ್ಪಿ ಹಾಗೂ ಇತರರು. ಅವರನ್ನು ಎರಡು ವಾರದಲ್ಲಿ ವರ್ಗಾವಣೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಗೋಖಲೆ ಎಚ್ಚರಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ರಾಜಕುಮಾರ ಸಿಂಧೆ, ಪ್ರಮುಖರಾದ ತಿಪ್ಪಣ್ಣ ವಾಲಿ, ಮಾರುತಿ ಕಾಂಬ್ಳೆ, ರವಿ ಕೋಟೆರ್, ದತ್ತಾತ್ರಿ ನಾಗವಂಶಿ ಇತರರಿದ್ದರು.