

ಬೀದರ್: ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆದರೆ ಜೀವನ ವಿಕಾಸವಾಗುತ್ತದೆ. ದುರ್ಗಣಗಳನ್ನು ಬಿಟ್ಟು ಶಿವಗುಣ ಬೆಳೆಸಿಕೊಳ್ಳಬೇಕು ಎಂದು ಬೇಮಳಖೇಡ್-ಗೋರ್ಟಾದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು.
ಚಿದ್ರಿಯ ಭವಾನಿ ಮಾತೆ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಭವಾನಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಅಚಲ ಭಕ್ತಿಯೊಂದಿಗೆ ದೇವರನ್ನು ನಂಬಿದರೆ ಸಂಕಷ್ಟಗಳು ದೂರವಾಗುತ್ತವೆ. ಜಗತ್ತಿನ ತಾಯಿ ಪಾರ್ವತಿ ದೇವಿಗೆ ಶರಣಾಗತನಾಗುವ ಭಕ್ತನ ದುಃಖ ಪರಿಹರಿಸುತ್ತಾಳೆ. ಜೀವನದಲ್ಲಿ ಶಾಂತಿ, ಸಮೃದ್ಧಿ, ನೆಮ್ಮದಿ ದೊರೆಯಬೇಕಾದರೆ ಭವಾನಿ ಮಾತೆಯನ್ನು ಪೂಜಿಸಬೇಕು ಎಂದು ಹಿತೋಪದೇಶ ನೀಡಿದರು.
ಬಾವಗಿ ಭದ್ರಯ್ಯ ಸ್ವಾಮಿ ನೇತೃತ್ವದಲ್ಲಿ ಶ್ರೀ ರುದ್ರಮುನಿ ದೇವರು, ನಾಗರಾಜ ಸ್ವಾಮಿ, ಆಕಾಶ ಸ್ವಾಮಿ ರುದ್ರಾಭಿಷೇಕ ಪೂಜೆ ನೆರವೇರಿಸಿದರು. ಪ್ರಮುಖರಾದ ರಾಮಶೆಟ್ಟಿ ಮಹಾಶೆಟ್ಟಿ, ಸಂಗಶೆಟ್ಟಿ ಬಿರಾದಾರ್, ವೀರಶೆಟ್ಟಿ ಮಹಾಶೆಟ್ಟಿ, ಮಧುಕರ ಹಳಕುಂದೆ, ಮನೋಜ ಮಾಲಿಪಾಟೀಲ್, ತಿಪ್ಪಣ್ಣ ಹೊನ್ನಾಡಿ, ಆನಂದ ಮಹಾಶೆಟ್ಟಿ, ಮಹೇಶ ಮಹಾಶೆಟ್ಟಿ, ಗಿರೀಶ ಪಾಟೀಲ್, ಮಹೇಶ ಪಾಟೀಲ್, ಸಂಗಪ್ಪ ಚಿದ್ರಿ, ಬಾಬುರಾವ ಶಿಖರಖಾನಿ, ಶಿವಕುಮಾರ ಹಡಪದ ಇತರರಿದ್ದರು.
ಮೂರು ದಿನ ಪ್ರಾಣಪ್ರತಿಷ್ಠಾಪನೆಯ ವಿಧಿ ವಿಧಾನ, ಭವಾನಿ ಮಾತೆ ಮೂರ್ತಿ ಭವ್ಯ ಮೆರವಣಿಗೆ ಹಾಗೂ ನಿತ್ಯ ಮಹಾ ಪ್ರಸಾದ, ಭಜನೆ, ಸಂಗೀತ ಕಾರ್ಯಕ್ರಮ, ಕುಂಭಮೇಳ ಶ್ರದ್ಧಾ ಭಕ್ತಿಯಿಂದ ಜರುಗಿದವು.