

ಬೀದರ್: ತಾಲೂಕಿನ ಖೇರ್ಡಾ (ಬಿ) ಗ್ರಾಮದ ಹೊರವಲಯದಲ್ಲಿರುವ ಮುಲ್ಲಾಮಾರಿ ಮೇಲ್ದಂಡೆ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಾಯಿತು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಬಾಗಿನ ಅರ್ಪಿಸಿ ಮಾತನಾಡಿ, ಭರ್ತಿಯಾದ ಕೆರೆ, ಜಲಾಶಯಕ್ಕೆ ಕೃತಜ್ಞತಾ ಅರ್ಪಣಾ ಮನೋಭಾವದಿಂದ ಪೂಜೆ ಸಲ್ಲಿಸುವುದು ಭಾರತೀಯ ಸಂಸ್ಕೃತಿಯಾಗಿದೆ. ರೈತರ ಜೀವನಾಡಿಯಾಗಿರುವ ಜಲಾಶಯಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ನೀರಿನಿಂದ ತುಂಬಿರಲಿ ಎನ್ನುವ ಭಕ್ತಿ ಸಮರ್ಪಿಸಿದಂತಾಗುತ್ತದೆ ಎಂದು ಹೇಳಿದರು.
ಉತ್ತಮವಾಗಿ ಮಳೆಯಾಗಿದ್ದರಿಂದ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದ್ದು, ರೈತರ ಮನದಲ್ಲಿ ಮಂದಹಾಸ ಮೂಡಿದೆ. ರೈತರು ಕಾಲಕಾಲಕ್ಕೆ ತಕ್ಕಂತೆ ಬೆಳೆಗಳಿಗೆ ನೀರಿನ ಸದುಪಯೋಗ ಪಡೆದುಕೊಳ್ಳಬೇಕು. ನೀರನ್ನು ಪೋಲಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.
ಖೇಳಗಿ ವೀರಕ್ತ ಮಠದ ಪೀಠಾಧಿಪತಿ ಶ್ರೀ ಶಿವಲಿಂಗ ಸ್ವಾಮೀಜಿ, ನೀರಾವರಿ ಇಲಾಖೆಯ ಕಲಬುರಗಿಯ ಮುಖ್ಯ ಅಭಿಯಂತರ ಸೂರ್ಯಕಾಂತ ಮಾಲೆ, ಕಾರ್ಯಪಾಲಕ ಅಭಿಯಂತರ ಜ್ಞಾನೇಶ್ವರ ಮುಂಡೆ, ಎಇಇ ಸಂತೋಷ ಮಾಕಾ, ಶರಣಕುಮಾರ, ಗೌತಮ್,
ಗ್ರಾಪಂ ಅಧ್ಯಕ್ಷೆ ಪವಿತ್ರಾ ಜೈಭೀಮ, ಉಪಾಧ್ಯಕ್ಷ ಯಲ್ಲಪ್ಪ, ಮಾಜಿ ಅಧ್ಯಕ್ಷ ರಾಚಣ್ಣ ಸಾಹು, ದತ್ತಣ್ಣ ಬೆಳಮಗಿ, ವಿಶ್ವನಾಥ ರಾಠೋಡ್, ಧೂಳಪ್ಪ ಪಂಢರಿ, ನಾಗರಾಜ ದರ್ಜಿ ಇತರರಿದ್ದರು.