

ಬೀದರ್: ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಬೀದರ್‍ನಿಂದ ರಾಯಚೂರು ಆರ್.ಟಿ.ಒ ಕಚೇರಿಗೆ ವರ್ಗಾವಣೆಗೊಂಡಿರುವ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಮಂಜುನಾಥ ಕೊರವಿ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಭಾರತೀಯ ಟ್ರಾನ್ಸ್‍ಪೋರ್ಟರ್ಸ್ ಆ್ಯಂಡ್ ಆಲ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ತಹಶೀಲ್ದಾರ್ ಕಚೇರಿ, ಶಿವಾಜಿ ವೃತ್ತದ ಮಾರ್ಗವಾಗಿ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಕೊರವಿ ಅವರು ಬೀದರ್ ಆರ್.ಟಿ.ಒ. ಕಚೇರಿಯಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಲಾರಿ, ಟಿಪ್ಪರ್, ಟ್ರ್ಯಾಕ್ಟರ್ ಮೊದಲಾದ ವಾಹನಗಳ ಮಾಲೀಕರಿಂದ ಪ್ರತಿ ತಿಂಗಳು ಹಫ್ತಾ ವಸೂಲಿ ಮಾಡಿದ್ದಾರೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆಸ್ತಿ ಗಳಿಸಿದ್ದಾರೆ. ಭ್ರಷ್ಟಾಚಾರದ ಕಾರಣಕ್ಕಾಗಿಯೇ ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
ಕೊರವಿ ಅವರಿಗೆ ಸರ್ಕಾರಿ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಎಂ.ಡಿ. ಮೋಸಿನ್, ಉಪಾಧ್ಯಕ್ಷ ಸಾಜೀದ್ ಅಲಿ, ಕಾರ್ಯದರ್ಶಿ ರಮೇಶ, ಪ್ರಮುಖರಾದ ಭೀಮಣ್ಣ ಸೋರಳ್ಳಿ, ಓಂಕಾರ ಬುಳ್ಳಾ, ಶ್ರೀನಿವಾಸ್ ರೆಡ್ಡಿ, ರಾಜಶೇಖರ ನೌಬಾದೆ, ಚಂದು ಪಾಟೀಲ ಒಳಕೋಟೆ, ಭೀಮಣ್ಣ ಸೋರಳ್ಳಿ, ಜಗನ್ನಾಥ ಯದಲಾಪುರೆ, ಕಲ್ಯಾಣರಾವ್ ಬಿರಾದಾರ, ಅಮೃತ ಡಿ.ಜೆ. ಮೊದಲಾದವರು ಪಾಲ್ಗೊಂಡಿದ್ದರು.