ಮಂದಿರ ನಿರ್ಮಾಣಕ್ಕಾಗಿ ವಾಗ್ವಾದ

images
Published on

ಬಸವಕಲ್ಯಾಣ: ರಾಜೋಳ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಮಂದಿರ ನಿರ್ಮಾಣ ಸಂಬಂಧ ಎರಡು ಸಮುದಾಯದ ಜನರ ನಡುವೆ ವಾಗ್ವಾದ ನಡೆಯಿತು.

ಗ್ರಾಮ ಪಕ್ಕದ ಅರಣ್ಯ ಇಲಾಖೆ ಭೂಮಿಗೆ ಹೊಂದಿಕೊಂಡು ಶ್ರೀ ಬೀರಲಿಂಗೇಶ್ವರ ದೇವಸ್ಥಾನವಿದ್ದು, ಇದರ ಪಕ್ಕದ ಖಾಲಿ ಸ್ಥಳ ನಮ್ಮದು ಎಂದು ಕುರುಬ ಸಮಾಜದವರು ಜೆಸಿಬಿ ಯಂತ್ರದ ಮೂಲಕ ಸ್ವಚ್ಛತೆಗೆ ಮುಂದಾಗಿದ್ದರು. ಇದನ್ನು ಗಮನಿಸಿದ ಇತರ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿ ಇದು ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಎಂದು ಹೇಳುವ ಜತೆಗೆ ಅದೇ ಸ್ಥಳದಲ್ಲಿ ಕಟ್ಟೆ ನಿರ್ಮಿಸಿ ವೀರಭದ್ರೇಶ್ವರ ಭಾವಚಿತ್ರ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.

ಈ ವೇಳೆ ಎರಡು ಸಮುದಾಯದ ಜನರ ನಡುವೆ ಗಲಾಟೆಯಾಗಿದೆ. ವಿಷಯ ತಿಳಿದು ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡರ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿ ಶಾಂತಗೊಳಿಸಿದರು.

ಖಾಲಿ ಜಾಗ ಅರಣ್ಯ ಇಲಾಖೆಗೆ ಸೇರಿದ್ದರಿಂದ ಯಾವುದೇ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಹೇಳಿ ನೆರೆದಿದ್ದವರನ್ನು ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net