ತನಿಖಾ ಸಂಸ್ಥೆ ದುರುಪಯೋಗಕ್ಕೆ ಕಿಡಿ

DSS protest
Published on

ಬೀದರ್: ಸಾಂವಿಧಾನಿಕ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಹಾಗೂ ಸಿಎಂ ಸಿದ್ದರಾಮಯ್ಯ ಸರ್ಕಾರ ಪತನಕ್ಕೆ ಷಡ್ಯಂತ್ರ ಮಾಡುತ್ತಿರುವ ಬಿಜೆಪಿ-ಜೆಡಿಎಸ್ ಕ್ರಮ ವಿರೋಧಿಸಿ ನಗರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಅರೆಬೆತ್ತಲೆ ಮೆರವಣಿಗೆ ನಡೆಯಿತು.

ಡಾ.ಬಿ.ಆರ್. ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಸಮಿತಿ ಪ್ರಮುಖರು, ಕೇಂದ್ರದ ಅಧೀನದಲ್ಲಿರುವ ಇಡಿ, ಐಟಿ, ಸಿಬಿಐ ಮತ್ತು ರಾಜಭವನಗಳ ಮೂಲಕ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಪತನಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ದೇಶದ ಅಖಂಡತೆಗೆ ಧಕ್ಕೆ ತಂದೊಡ್ಡಲು ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಯೇತರ ಪಕ್ಷಗಳನ್ನು ಆಡಳಿತದಿಂದ ಕೆಳಗಿಳಿಸುವ ಹುನ್ನಾರ ನಡೆಯುತ್ತಿದೆ. ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ಬಳಸಲಾಗುತ್ತಿದೆ. ಯಾವ ಕಾರಣಕ್ಕೂ ಅವರು ರಾಜೀನಾಮೆ ನೀಡಬಾರದು. ರಾಜ್ಯ ಸರ್ಕಾರ ಪತನಗೊಳಿಸಲು ಷಡ್ಯಂತ್ರ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ಗೆ ರಾಜ್ಯದ ಜನತೆ ಕ್ಷಮಿಸಲಾರರು ಎಂದರು.

ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಚಾಲಕ ಅರುಣ ಪಟೇಲ್, ಪ್ರಮುಖರಾದ ಅಶೋಕ ಗಾಯಕವಾಡ, ರಾಜಕುಮಾರ ವಾಘಮಾರೆ, ಶಿವರಾಜ ತಡಪಳ್ಳಿ, ವಾಮನ ಮೈಸಲಗೆ, ರಮೇಶ ಬೆಲ್ದಾರ್, ಸತೀಶ ರತ್ನಾಕರ್, ಝರೆಪ್ಪ ವರ್ಮಾ, ಶಿರೋಮಣಿ ಹಲಗೆ, ಬಸವರಾಜ ಭಾವಿದೊಡ್ಡಿ, ರಾಹುಲ್ ಹಾಲಹಿಪ್ಪರ್ಗಾ, ವಿಜಯಕುಮಾರ ಭಾವಿಕಟ್ಟಿ, ಶಿವಕುಮಾರ ಗುನ್ನಳ್ಳಿ, ಗೌತಮ ಮುತ್ತಂಗಿಕರ್, ಜೈಭೀಮ ಚಿಮ್ಮನಾಯಕ, ಕರಣ ಜಡಗೆ, ಅಜಯ ದೀನೆ, ಬಾಬುರಾವ ಹೊನ್ನಾ, ವಿಠಲದಾಸ ಪ್ಯಾಗೆ ಇತರರಿದ್ದರು. ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net