

ಬೀದರ್: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ದಾಖಲಾದ ಹೊಸ (ಫ್ರೆಶರ್) ವಿದ್ಯಾರ್ಥಿಗಳ ವಿವರವನ್ನು ಕೆಎಸ್ಇಎಬಿ ಸ್ಯಾಟ್ಸ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ಹೇಳಿದರು.
ಮಾಧವ ನಗರದಲ್ಲಿರುವ ಆರ್ಆರ್ಕೆ ಪದವಿಪೂರ್ವ ಕಾಲೇಜಿನಲ್ಲಿ ಕರೆದಿದ್ದ ಶೈಕ್ಷಣಿಕ ಪ್ರಗತಿ ಕುರಿತ ಜಿಲ್ಲಾ ಪ್ರಾಚಾರ್ಯರ ಸಭೆಯಲ್ಲಿ ಮಾತನಾಡಿದ ಅವರು, 2025ರ ಪರೀಕ್ಷೆ-1ರಿಂದ ಯಾವೊಬ್ಬ ವಿದ್ಯಾರ್ಥಿ ವಂಚಿತವಾಗಬಾರದು ಎಂಬ ಸದುದ್ದೇಶದಿಂದ ನೋಂದಣಿ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ಮೊಬೈಲ್ ಸಂಖ್ಯೆ, ಪರೀಕಾ ಶುಲ್ಕ ಇತರ ವಿವರ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು. ಉತ್ತರ ಪತ್ರಿಕೆಗಳ ಸುಗಮ ಮೌಲ್ಯಮಾಪನಕ್ಕಾಗಿ ಆಯಾ ವಿಷಯದ ಮೌಲ್ಯಮಾಪಕರ ಹೆಸರು ಸಹ ನೋಂದಾಯಿಸಬೇಕು ಎಂದು ಹೇಳಿದರು.
ಕಾರ್ಯಭಾರವಿಲ್ಲದ ಕಾಲೇಜುಗಳಿಂದ ಕಾರ್ಯಭಾರವಿರುವ ಕಾಲೇಜುಗಳಿಗೆ ನಿಯೋಜಿತ ಉಪನ್ಯಾಸಕರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಿಶೇಷ ಕ್ರೀಡಾ ಶುಲ್ಕ, ಧ್ವಜ ಶುಲ್ಕ, ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿ, ವಿದ್ಯಾರ್ಥಿಗಳ ಕಲ್ಯಾಣ ನಿಧಿ ಸಕಾಲಕ್ಕೆ ಪಾವತಿಸಿ ಸ್ಯಾಟ್ಸ್ ನಲ್ಲಿ ಅಪ್ಲೋಡ್ ಮಾಡಬೇಕು. ಪಿಯು ಫಲಿತಾಂಶ ಸುಧಾರಣೆಗಾಗಿ ಹೆಚ್ಚುವರಿ ತರಗತಿ ನಡೆಸುವುದರ ಜತೆಗೆ ಎಲ್ಲ ವಿಷಯ ಉಪನ್ಯಾಸಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಹೊಸ ಕಾಲೇಜು ಮಂಜೂರಿಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.
ಜಿಲ್ಲಾ ನೋಡಲ್ ಅಧಿಕಾರಿ ಚಂದ್ರಕಾಂತ ಗಂಗಶೆಟ್ಟಿ ಮಾತನಾಡಿ, ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಿಗೆ ಮಂಜೂರಾದ ಅನುದಾನವನ್ನು ನಿಗದಿತ ಅವಯೊಳಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಮನ್ಮಥ ಡೋಳೆ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಓಂಕಾಂತ ಸೂರ್ಯವಂಶಿ, ಪ್ರಾಚಾರ್ಯರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ, ಸಹ ಕಾರ್ಯದರ್ಶಿ ಶ್ರೀಕಾಂತ ಪಾಟೀಲ್ ಇತರರಿದ್ದರು.