ರಾಜಕಾರಣಿಗಳಿಂದ ಕನ್ನಡ ಶಾಲೆ ಮುಚ್ಚುವ ಯತ್ನ

Karanataka Sambharm
Published on

ಬೀದರ್: ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಮುಚ್ಚುವ ವ್ಯವಸ್ಥಿತ ಪ್ರಯತ್ನ ಸ್ವಾರ್ಥ ರಾಜಕಾರಣಿಗಳಿಂದ ನಡೆಯುತ್ತಿದೆ ಎಂದು ಬೆಂಗಳೂರಿನ ಇನ್‍ಸೈಟ್ಸ್ ಐಎಎಸ್ ತರಬೇತಿ ಕೇಂದ್ರದ ಮುಖ್ಯಸ್ಥ ವಿನಯಕುಮಾರ ಜಿ.ಬಿ. ಬೇಸರ ವ್ಯಕ್ತಪಡಿಸಿದರು.

ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಹಾಗೂ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಸಂಭ್ರಮ 50 ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಿಂದಾಗಿಯೇ ಇಂದು ಕನ್ನಡ ಉಳಿದಿದೆ. ಸರ್ಕಾರಿ ಶಾಲೆಗಳು ಮುಚ್ಚಿದರೆ ಕನ್ನಡ ನಶಿಸಲಿದೆ ಎಂದು ಆತಂಕ ಹೊರ ಹಾಕಿದರು.

ಕನ್ನಡಿಗರು ರಾಷ್ಟ್ರದ ಅತ್ಯುನ್ನತ ಹುದ್ದೆಗಳನ್ನು ಗಿಟ್ಟಿಸಿಕೊಂಡಾಗಲೇ ಕನ್ನಡದ ಸಮೃದ್ಧಿಯಾಗಲಿದೆ ಎಂದು ನುಡಿದರು.

ಕನ್ನಡಿಗರು ರಾಷ್ಟ್ರ ರಾಜಕಾರಣದಲ್ಲಿ ಮಿಂಚಬೇಕು. ಕನ್ನಡ, ಭಾಷೆ, ನೆಲ, ಜಲದ ಬಗ್ಗೆ ಸಂಸತ್ತಿನ ಧ್ವನಿ ಎತ್ತುವುದು ಇಂದಿನ ಅನಿವಾರ್ಯವಾಗಿದೆ ಎಂದು ಹೇಳಿದರು.

ಕನ್ನಡ ಮಣ್ಣಿನಲ್ಲಿ ಉದ್ಯಮಿಗಳು ಹೊರ ಹೊಮ್ಮಬೇಕು. ದೊಡ್ಡ ದೊಡ್ಡ ಉದ್ಯಮಗಳು ಆರಂಭಗೊಂಡು ಜಸನಾಮಾನ್ಯರ ಬದುಕಿಗೆ ಆಸರೆಯಾಗಬೇಕು ಎಂದರು.

ಕುವೆಂಪು ಅವರ ಕಾನೂನು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಗಳು ಇಂಗ್ಲಷ್‍ಗೆ ಅನುವಾದಿಸಿದರೆ ಪ್ರಪಂಚದ ಶ್ರೇಷ್ಠ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ನಮ್ಮದಾಗುತ್ತಿತ್ತು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಬಿ.ಎಂ. ಅಮರವಾಡಿ ಅವರು, ಜಾತಿ, ಧರ್ಮದ ಹೆಸರಿನಲ್ಲಿ ಛಿದ್ರವಾದರೆ ಕನ್ನಡ ಕಟ್ಟುವುದು ಹೇಗೆ, ಆಲೂರು ವೆಂಕಟರಾಯ, ಕುವೆಂಪು, ದೇವರಾಜ ಅರಸು ಅವರ ಏಕತೆಯ ಆದರ್ಶಗಳನ್ನು ಕನ್ನಡಿಗರು ಪಾಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಹಣ್ಮು ಪಾಜಿ ಮಾತನಾಡಿ, ಕನ್ನಡ ನಾಡು, ನುಡಿ, ಸಾಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಮುಖಂಡ ಲಕ್ಷ್ಮಣ ದಸ್ತಿ ಮಾತನಾಡಿದರು.

ವಿನಯಕುಮಾರ ಜಿ.ಬಿ. ಅವರಿಗೆ ಕನ್ನಡ ಸಾರಥಿ, ವಿವಿಧ ಕ್ಷೇತ್ರಗಳ 69 ಸಾಧಕರಿಗೆ ರಾಜ್ಯಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಕರ್ನಾಟಕ ವನ್ಯ ಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಲಿಂಗಾಯತ ಮಹಾ ಮಠದ ಪ್ರಭುದೇವರು ಸಾನಿಧ್ಯ ವಹಿಸಿದ್ದರು. ಶಿವಂ ಫೌಂಡೇಷನ್ ಅಧ್ಯಕ್ಷ ಪೀರಪ್ಪ ಔರಾದೆ, ಪ್ರಮುಖರಾದ ಜೈರಾಜ ಖಂಡ್ರೆ, ಹಣಮಂತ ಮಲ್ಕಾಪುರೆ ಅಭಿಷೇಕ ಮಠಪತಿ, ಪ್ರಶಾಂತ ದೊಡ್ಡಿ, ಉಮೇಶ ಶಹಾಪುರೆ, ನಾಗರಾಜ ಜೋಗಿ, ಶಾಂಭವಿ, ನಾಮದೇವ ಸೋಲಂಕೆ, ಪ್ರಕಾಶ ಕೌಟೆ, ಅನಿಲ್ ಜ್ಯಾಂತೆ, ಸಂಗಮೇಶ ಕೆ.ಎಸ್, ರಾಹುಲ್ ರಾಯ್, ಬಸವರಾಜ ಮೋಳಕೇರೆ, ಅನಿಲ್ ಸೋಲಂಕೆ, ಆನಂದ ಯೋಗಾ, ಆನಂದ ರೆಡ್ಡಿ, ಅಂಬರೀಷ್, ಅಂಬಾದಾಸ್, ಕೃಷ್ಣ ಮೊದಲಾದವರು ಇದ್ದರು.

ಭುವನೇಶ್ವರಿ ಭಾವಚಿತ್ರದ ಮೆರವಣಿಗೆ

ಕರ್ನಾಟಕ ಸಂಭ್ರಮ 50 ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಿಮಿತ್ತ ನಗರದಲ್ಲಿ ಅಲಂಕೃತ ರಥದಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದವರೆಗೆ ಮೆರವಣಿಗೆ ಜರುಗಿತು. ಆಟೋಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಇಡಲಾಗಿತ್ತು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಹಲಗೆ, ಚಕ್ಕಡಿಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net