ಗಾಂಧಿಗಂಜ್‍ನಲ್ಲಿ ಮುಹೂರ್ತ ವ್ಯಾಪಾರಕ್ಕೆ ಚಾಲನೆ

gandhi Gunj
Published on

ಬೀದರ್: ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಗಾಂಧಿಗಂಜ್‍ನಲ್ಲಿ ದೀಪಾವಳಿಯ ಮುಹೂರ್ತ ವ್ಯಾಪಾರಕ್ಕೆ ಚಾಲನೆ ನೀಡಲಾಯಿತು.

ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಖ್ಯಾತ ಉದ್ಯಮಿ ಬಸವರಾಜ ಧನ್ನೂರ ಅವರ ‘ಮೆಸರ್ಸ್ ಬಸವರಾಜ ಕಾಶಪ್ಪ ಧನ್ನೂರ ಆ್ಯಂಡ್ ಕಂಪನಿ'ಯ ಅಂಗಡಿಯಲ್ಲಿ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಬರ್ದಿಪುರ ಆಶ್ರಮದ ಅವಧೂತಗಿರಿ ಮಹಾರಾಜರು ಜಂಟಿಯಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಮುಹೂರ್ತ ವ್ಯಾಪಾರಕ್ಕೆ ಚಾಲನೆ ನೀಡಿದರು.

ಅನೇಕರನ್ನು ಎತ್ತರೆತ್ತರಕ್ಕೆ ಬೆಳೆಸಿದ ಹಿರಿಮೆ ಗಾಂಧಿಗಂಜ್ ಮಾರುಕಟ್ಟೆಯದ್ದಾಗಿದೆ. ಮುನೀಮರಾಗಿದ್ದವರು ಮಾಲೀಕರಾಗಿದ್ದಾರೆ. ಹೊಸಬರು ಉದ್ಯಮಿಗಳಾಗಿ ಹೊರ ಹೊಮ್ಮಿದ್ದಾರೆ ಎಂದು ಡಾ. ಶಿವಕುಮಾರ ಸ್ವಾಮೀಜಿ ನುಡಿದರು.

ಒಳ್ಳೆಯ ಮಾತು, ವಿನಯ ಹಾಗೂ ವಿವೇಕವಿದ್ದರೆ ಉದ್ಯಮದಲ್ಲಿ ಯಶಸ್ಸು ಗಳಿಸಬಹುದು ಎಂದು ತಿಳಿಸಿದರು.

ಕಾಯಕ ಬಹಳ ಶ್ರೇಷ್ಠವಾದದ್ದು. ಶ್ರದ್ಧೆ ಹಾಗೂ ಸೇವಾ ಮನೋಭಾವದಿಂದ ಮಾಡುವ ಕಾಯಕ ಸಮಾಧಾನ ಉಂಟು ಮಾಡುತ್ತದೆ. ಜೀವನದಲ್ಲಿ ಸಮೃದ್ಧಿಯನ್ನೂ ತರುತ್ತದೆ ಎಂದು ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ಸಂತರಲ್ಲಿ ಪರಮಾತ್ಮನ ವಾಸ ಇರುತ್ತದೆ. ಸಂತರು ಹಾಗೂ ಪೂಜ್ಯರನ್ನು ಕರೆಸಿ, ಮುಹೂರ್ತ ವ್ಯಾಪಾರ ಪೂಜೆ ನೆರವೇರಿಸಿರುವುದು ಸ್ತುತ್ಯಾರ್ಹ. ಎಲ್ಲರಿಗೂ ವ್ಯಾಪಾರದಲ್ಲಿ ಯಶಸ್ಸು ಸಿಗಲಿ ಎಂದು ಬರ್ದಿಪುರದ ಅವಧೂತಗಿರಿ ಮಹಾರಾಜರು ಎಂದು ಶುಭ ಹಾರೈಸಿದರು.

ದೀಪಾವಳಿ ನಂತರ ಮುಹೂರ್ತ ವ್ಯಾಪಾರದ ಸಂಪ್ರದಾಯ ಇದೆ. ಅದನ್ನು ನಿರಂತರ ಪಾಲಿಸಿಕೊಂಡು ಬರಲಾಗುತ್ತಿದೆ ಎಂದು ಬಸವರಾಜ ಧನ್ನೂರ ತಿಳಿಸಿದರು.

ಕೆ.ಆರ್.ಇ. ಸಂಸ್ಥೆಯ ಚುನಾವಣೆಯಲ್ಲಿ ಜಯ ಗಳಿಸಿದ ಬಿ.ಜಿ. ಶೆಟಕಾರ್, ಮಲ್ಲಿಕಾರ್ಜುನ ಹತ್ತಿ, ಮಡಿವಾಳಪ್ಪ ಗಂಗಶೆಟ್ಟಿ ಹಾಗೂ ವಿಕಾಸ್ ಗೋಯಲ್ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಪಾಂಚಾಳ ವಚನ ಗಾಯನ ನಡೆಸಿಕೊಟ್ಟರು.

ಬರ್ದಿಪುರದ ಡಾ. ಮಹಾಂತ ಸಿದ್ಧೇಶ್ವರಾನಂದಗಿರಿ ಮಹಾರಾಜ, ನಗರಸಭೆ ಅಧ್ಯಕ್ಷ ಮಹ್ಮಮದ್ ಗೌಸ್, ಎಪಿಎಂಸಿ ಕಾರ್ಯದರ್ಶಿ ಮಹೇಶ್ವರಿ ಫುಲೇಕರ್, ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ, ಕಾರ್ಯದರ್ಶಿ ಭಗವಂತ ಔದತ್ತಪುರ, ಅಶೋಕ ರೇಜಂತಲ್, ರಾಜಕುಮಾರ ಗುನ್ನಳ್ಳಿ, ಶಾಮರಾವ್ ಸುಲಗುಂಟೆ, ಸೋಮನಾಥ ಗಂಗಶೆಟ್ಟಿ, ಬಂಡೆಪ್ಪ ಬಾಲಾಜಿ, ನಾಗಶೆಟ್ಟಿ ಕಾರಾಮುಂಗಿ, ಅಣ್ಣಾರಾವ್ ಮೊಗಶೆಟ್ಟಿ, ವಿಶ್ವನಾಥ ಕಾಜಿ ಮೊದಲಾದವರು ಪಾಲ್ಗೊಂಡಿದ್ದರು. ನವಲಿಂಗ ಪಾಟೀಲ ನಿರೂಪಿಸಿದರು. ಸ್ಫೂರ್ತಿ ಧನ್ನೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net