ಬ್ರಿಮ್ಸ್ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ

brims meeting
Published on

ಬೀದರ್: ವಿದ್ಯಾರ್ಥಿಗಳ ಪ್ರವೇಶಾತಿಗೆ ತಕ್ಕಂತೆ ಬೋಧಕರ ನೇಮಕಾತಿ, ಹೊರಗುತ್ತಿಗೆ ವೈದ್ಯರು ಹಾಗೂ ಸಿಬ್ಬಂದಿ ವೇತನ ಪಾವತಿ, ಕಟ್ಟಡ ದುರಸ್ತಿ, ಸುರಕ್ಷತೆ ಹಾಗೂ ಭದ್ರತೆ ಇತರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ಬ್ರಿಮ್ಸ್ನಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಗಡಿಯಲ್ಲಿನ ಮಹಾರಾಷ್ಟ್ರ, ತೆಲಂಗಾಣ ಹಾಗೂ ಜಿಲ್ಲೆಯ ರೋಗಿಗಳಿಗೆ ಅನುಕೂಲವಾಗಿರುವ ಬ್ರಿಮ್ಸ್ ನ ಸಮಗ್ರ ಅಭಿವೃದ್ಧಿ ಹಾಗೂ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮ ವಹಿಸುವೆ ಎಂದರು.

ಪ್ರಸಕ್ತ ವರ್ಷ ಏಳು ಕೋಟಿ ವೇತನ ಅನುದಾನ ಬಂದಿದ್ದು ಹಾಗೂ ಇನ್ನು 4.5 ಕೋಟಿ ರೂ. ವೇತನ ಅನುದಾನ ಅಗತ್ಯದ ಬಗ್ಗೆ ಬ್ರಿಮ್ಸ್ ನಿರ್ದೇಶಕಿ ಡಾ.ಶಾಂತಲಾ ಕೌಜಲಗಿ ಮಾಹಿತಿ ನೀಡಿದರು. ಹಲವಾರು ತಿಂಗಳಿಂದ ಬಾಕಿಯಿರುವ ಹೊರಗುತ್ತಿಗೆ ವೈದ್ಯರ ಹಾಗೂ ಇತರ ಸಿಬ್ಬಂದಿ ವೇತನ ಪಾವತಿಸಲಾಗುವುದು. ಖಾಲಿ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಿದ್ಧಗೊಳಿಸಬೇಕು ಹಾಗೂ ಬ್ರಿಮ್ಸ್ ನಲ್ಲಿ ಐದು ವರ್ಷದಲ್ಲಿ ನಡೆದ ಹಣದ ವ್ಯವಹಾರ ಕುರಿತು ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಬ್ರಿಮ್ಸ್ ನ ಹೆಚ್ಚಿನ ಸುಧಾರಣೆ, ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ವೈದ್ಯಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಸಾಮಾಜಿಕ ಸಹಭಾಗಿತ್ವ ಜವಾಬ್ದಾರಿ (ಸಿಎಸ್ಆರ್) ಹಾಗೂ ಕೆಕೆಆರ್.ಡಿಬಿ ಅನುದಾನದಡಿ ಬ್ರಿಮ್ಸ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬ್ರಿಮ್ಸ್ ಕಟ್ಟಡ ಅಲ್ಲಲ್ಲಿ ಸೋರುತ್ತಿದ್ದು, ಲೋಕೋಪಯೋಗಿ ಇಲಾಖೆ ತಕ್ಷಣ ದುರಸ್ತಿ ಮಾಡಬೇಕು. ಶೌಚಗೃಹ ನವೀಕರಣಗೊಳಿಸಬೇಕು. ಅಗತ್ಯ ಉಪಕರಣಗಳನ್ನು ಕೆಕೆಆರ್ಡಿಬಿ ಅನುದಾನದಡಿ ತರಿಸಲಾಗುವುದು. ಆವರಣದಲ್ಲಿ ಭದ್ರತೆ ಹೆಚ್ಚಿಸಿ ಸುರಕ್ಷತೆಗಾಗಿ ಮಹಿಳಾ ಪೇದೆ ನೇಮಿಸಬೇಕು ಎಂದು ನಿರ್ದೇಶನ ನೀಡಿದರು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಬ್ರಿಮ್ಸ್ ನೆಲಮಹಡಿಯಲ್ಲಿ ನೀರು ಸಂಗ್ರಹ ಹಾಗೂ ಕಟ್ಟಡದ ವಿವಿಧೆಡೆ ನೀರು ಸೋರಿಕೆಯಾಗುತ್ತಿದೆ. ಬ್ರಿಮ್ಸ್ ನಿರ್ಮಿಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಕಳೆದ ವರ್ಷ ಆದೇಶ ಮಾಡಿದರೆ ಈವರೆಗೆ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರನ್ನು ತಕ್ಷಣ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ವೈದ್ಯಕೀಯ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಮಹ್ಮದ್ ಮೊಹಸಿನ್, ಡಿಸಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net