ಸ್ವಚ್ಛತೆ ಜತೆ ದೀಪಾವಳಿ ಆಚರಿಸಿ

Gandhi Gunj
Published on

ಬೀದರ್: ಈ ಬಾರಿ ದೀಪಾವಳಿ ಹಬ್ಬವನ್ನು ಪ್ರತಿಯೊಬ್ಬರೂ ಸ್ವಚ್ಛತೆಯೊಂದಿಗೆ ಆಚರಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್ ಹೇಳಿದರು.

ನೆಹರೂ ಯುವ ಕೇಂದ್ರ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್, ಕರ್ನಾಟಕ ಫಾರ್ಮಸಿ ಕಾಲೇಜಿನ ಎನ್‍ಎಸ್‍ಎಸ್ ಘಟಕ ಹಾಗೂ ಕರ್ನಾಟಕ ಪದವಿ ಕಾಲೇಜಿನ ಎನ್‍ಸಿಸಿ ಘಟಕದ ವತಿಯಿಂದ ನನ್ನ ಭಾರತದೊಂದಿಗೆ ದೀಪಾವಳಿ ಅಭಿಯಾನ ನಿಮಿತ್ತ ನಗರದ ಗಾಂಧಿಗಂಜ್‍ನ ಶಿವಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಾಪಾರಸ್ಥರು ಅಂಗಡಿ ಹಾಗೂ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಸ್ವಸ್ಥ ಹಾಗೂ ಸುಂದರ ಸಮಾಜ ನಿರ್ಮಾಣದಲ್ಲಿ ಸ್ವಚ್ಛತೆಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ನೆಹರೂ ಯುವ ಕೇಂದ್ರದಿಂದ ಅಕ್ಟೋಬರ್ 30 ರ ವರೆಗೆ ನನ್ನ ಭಾರತದೊಂದಿಗೆ ದೀಪಾವಳಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಾರುಕಟ್ಟೆ, ಆಸ್ಪತ್ರೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಸಂಚಾರ ಜಾಗೃತಿ ಮೊದಲಾದವು ಅಭಿಯಾನದ ಭಾಗವಾಗಿವೆ. ಅಭಿಯಾನ ನಿಮಿತ್ತ ನಿತ್ಯ ಸಾವಿರ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.

ಕೆ.ಆರ್.ಇ. ಸಂಸ್ಥೆಯ ಕಾರ್ಯದರ್ಶಿ ಸತೀಶ್ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತೆಯ ಮಹತ್ವ ಅರಿಯಬೇಕು. ಮನೆ, ಸುತ್ತಮುತ್ತಲಿನ ಆವರಣ ಶುಚಿಯಾಗಿ ಇಟ್ಟುಕೊಳ್ಳಬೇಕು. ಜನರಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಅಭಿಯಾನದ ಅಂಗವಾಗಿ ಗಾಂಧಿಗಂಜ್‍ನಲ್ಲಿ ಜಾಥಾ ನಡೆಸಲಾಯಿತು. ನೆಹರೂ ಯುವ ಕೇಂದ್ರ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಎನ್.ಎಸ್.ಎಸ್., ಎನ್.ಸಿ.ಸಿ ಪ್ರತಿನಿಧಿಗಳು ಕೈಯಲ್ಲಿ ಪೊರಕೆ ಹಿಡಿದು ವಿವಿಧೆಡೆ ಸ್ವಚ್ಛತಾ ಕಾರ್ಯ ಕೈಗೊಂಡರು.

ಗಾಂಧಿಗಂಜ್‍ನ ಸಂಘ ಸಂಸ್ಥೆಗಳ ಪ್ರಮುಖರಾದ ಸೋಮನಾಥ ಗಂಗಶೆಟ್ಟಿ, ನಾಗಶೆಟ್ಟೆಪ್ಪ ದಾಡಗಿ, ಡಾ. ಪ್ರಭುಲಿಂಗ ಬಿರಾದಾರ, ಬಸವರಾಜ ಸ್ವಾಮಿ ಹೆಡಗಾಪುರ, ಸತೀಶ್ ಬೆಳಕೋಟೆ, ಸೋಮನಾಥ ಪೂಜಾರಿ, ಕರ್ನಾಟಕ ಫಾರ್ಮಸಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಮಲ್ಲಿಕಾರ್ಜುನ ಪಾಟೀಲ ಮತ್ತಿತರರು ಇದ್ದರು.

ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಸ್ವಾಗತಿಸಿದರು. ಸಂಜನಾ ಸುನೀಲ್ ನಿರೂಪಿಸಿದರು. ಕರ್ನಾಟಕ ಫಾರ್ಮಸಿ ಕಾಲೇಜು ಪ್ರಾಚಾರ್ಯ ಕಾಶಿನಾಥ ನೌಬಾದೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net