ಕನ್ನಡ ಬಳಸದ ನಾಮಫಲಕಗಳಿಗೆ ಮಸಿ

Somnath Mudhool
Published on

ಬೀದರ್: ಶೇ.60 ರಷ್ಟು ಭಾಗದಲ್ಲಿ ಕನ್ನಡ ಬಳಸದ ನಾಮಫಲಕಗಳಿಗೆ ಮಸಿ ಬಳಿಯಲಾಗುವುದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ನಾಮಫಲಕ ಅಳವಡಿಕೆಗೆ ಈಗಾಗಲೇ ಅನೇಕ ಬಾರಿ ಹೋರಾಟ ನಡೆಸಿ, ಕಾಲಾವಕಾಶವನ್ನೂ ನೀಡಲಾಗಿದೆ. ಆದರೆ ಬಹುತೇಕ ಕಡೆ ಆಂಗ್ಲದಲ್ಲಿ ನಾಮಫಲಕಗಳಿವೆ. ಇನ್ಮುಂದೆ ಮಸಿ ಬಳಿದು ಪ್ರತಿಭಟಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂಗಡಿ-ಮುಂಗಟ್ಟು, ವಾಣಿಜ್ಯ ಮಳಿಗೆ, ಜಾಹೀರಾತು ಫಲಕ ಸೇರಿ ಎಲ್ಲ ರೀತಿಯ ನಾಮಫಲಕಗಳ ಮೇಲೆ ಶೇ.60 ರಷ್ಟು ಭಾಗದಲ್ಲಿ ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದೆ. ಆದರೂ, ನಗರದಲ್ಲಿ ಈ ಆದೇಶ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮುಖ ನೋಡಿ ಮಣೆ ಹಾಕುವ ಕಾರ್ಯದಲ್ಲಿ ಜಿಲ್ಲಾಡಳಿತ ತೊಡಗಿದೆ. ಇಲ್ಲಿನ ಶಿವನಗರ ರಿಂಗ್ ರಸ್ತೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿ ವಿವಿಧೆಡೆ ಆಂಗ್ಲ ನಾಮಫಲಕಗಳು ಕಂಡು ಬರುತ್ತಿದ್ದರೂ ಜಿಲ್ಲಾಡಳಿತ ಮೌನ ವಹಿಸಿದೆ. ನೆಪ ಮಾತ್ರಕ್ಕೆ ಬಡ ಹಾಗೂ ಸಣ್ಣ ಅಂಗಡಿಗಳ ಬೋಡ್೯ ತೆಗೆಸಿ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ದೂರಿದರು.

ಸರೋಜಿನಿ ಮಹಷಿ ಆಯೋಗದ ವರದಿ ಜಾರಿ ಮಾಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಎಲ್ಲ ಖಾಸಗಿ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಈ ವರದಿ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಅನಿಲ ಹೇಡೆ, ಬಂಡೆಪ್ಪ ಕರಬಸಪ್ಪ, ವಿರೇಶರಡ್ಡಿ, ವಿಶ್ವನಾಥ ಗೌಡ, ಸೋಮಶೇಖರ ಸಜ್ಜನ್, ಉದಯಕುಮಾರ ಅಷ್ಟೂರೆ, ನಾಗೇಶ ಕಮಠಾಣಾ, ನಾಗಯ್ಯ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net