

ಬೀದರ್: ಬೆಂಗಳೂರು-ಬೀದರ್ ನಡುವೆ ಹೊಸ ವಂದೇ ಭಾರತ್ ರೈಲು ಸೇವೆ ಪ್ರಾರಂಭಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಒತ್ತಾಯಿಸಿದರು.
ತೆಲಂಗಾಣದ ಸಿಕಿಂದ್ರಾಬಾದ್ನಲ್ಲಿ ಕರೆದಿದ್ದ ದಕ್ಷಿಣ ಮಧ್ಯ ರೈಲ್ವೆ ಸಭೆಯಲ್ಲಿ ಮಾತನಾಡಿ, ಬೀದರ್ ಮತ್ತು ಇತರ ಪ್ರಮುಖ ನಗರಗಳ ನಡುವಿನ ರೈಲು ಸಂಚಾರ ಹೆಚ್ಚಿಸಬೇಕು. ಬೀದರ್-ಯಶವಂತಪುರ ರೈಲು ವಾರದಲ್ಲಿ ನಾಲ್ಕು ಬಾರಿ ಬೀದರ್ ಹಾಗೂ ಮೂರು ಬಾರಿ ಲಾತೂರಿನಿಂದ ಸಂಚರಿಸುತ್ತಿದೆ. ನಿತ್ಯವೂ ಸಾವಿರಾರು ಜನ ಸಂಚರಿಸುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣ ಈ ರೈಲು ಅನುಕೂಲಕರವಲ್ಲ. ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೀದರ್-ಯಶವಂತಪುರ ರೈಲು ವಾಯಾ ಕಲಬುರಗಿ ಮೂಲಕ ನಿತ್ಯ ಓಡಿಸಬೇಕು ಎಂದು ಗಮನಕ್ಕೆ ತಂದರು.
ಬೀದರ್-ಮುಂಬೈ ರೈಲು ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣ ನಿತ್ಯ ಓಡಿಸಬೇಕು. ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗ ಚಿಂಚೋಳಿ ಮೂಲಕ ಮಾಡಲು ಯೋಜಿಸಬೇಕು. ಇದರಿಂದ ಈ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಖಾನಾಪುರದ ಪಿಟ್ ಲೈನ್ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಬೀದರ್ ನಿಂದ ನವದೆಹಲಿಗೆ ನೇರ ರೈಲು ಸಂಪರ್ಕದ ಅಗತ್ಯವಿದ್ದು, ದಕ್ಷಿಣ ಎಕ್ಸ್ ಪ್ರೆಸ್ ರೈಲು ಬೀದರ್ವರೆಗೆ ವಿಸ್ತರಿಸಬೇಕು. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಗೇಟ್, ಆರ್ ಒಬಿ ಮತ್ತು ಆರ್.ಯುಬಿ ನಿರ್ಮಾಣ ಅಥವಾ ಸುಧಾರಣೆಗೆ ಒಪ್ಪಿಗೆ ನೀಡಲು ತಕ್ಷಣ ಅನುಮೋದನೆ ನೀಡುವಂತೆ ಆಗ್ರಹಿಸಿದರು.