ಸಮಾಜ ಸುಧಾರಣೆ ಸಾಹಿತ್ಯ ರಚನೆಯಾಗಲಿ

karnataka collage
Published on

ಬೀದರ್: ಸಮಾಜದ ಎಲ್ಲ ಕ್ಷೇತ್ರಗಳು ಪ್ರಸ್ತುತ ಕೆಟ್ಟು ಹೋಗಿವೆ. ಸಾಮಾಜಿಕ ಜಾಲತಾಣಗಳು ಬಂದ ನಂತರ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಸಮಾಜ ಸುಧಾರಣೆ ಮಾಡುವಂಥ ಸಾಹಿತ್ಯ ರಚನೆಯಾಗಲಿ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ (ಕೆಆರ್.ಇ) ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸತೀಶ ಪಾಟೀಲ್ ಹೇಳಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ಅಂತರ ಮಹಾವಿದ್ಯಾಲಯ ವಿದ್ಯಾರ್ಥಿಗಳ ಸ್ವರಚಿತ ಕವನ ವಾಚನ ಮತ್ತು ಗೀತಗಾಯನ ಸ್ಪರ್ಧೆ ಉದ್ಘಾಟಿಸಿದ ಅವರು, ಸಮಾಜದ ಸ್ವಾಸ್ಥ್ಯ ಹೆಚ್ಚಿಸುವ ಕೃತಿಗಳು ಹೆಚ್ಚೆಚ್ಚು ಹೊರಬರಲಿ ಎಂದು ಆಶಿಸಿದರು.

ವ್ಯಕ್ತಿಯಲ್ಲಿ ಅಡಗಿರುವ ಭಾವನೆಗಳನ್ನು ಹೊರಹಾಕುವ ಕಲಾಪ್ರಕಾರವೇ ಸಾಹಿತ್ಯ. ಹೃದಯಕ್ಕೆ ತಟ್ಟುವ, ಸಮಾಜವನ್ನು ತಿದ್ದುವ ಕವನಗಳನ್ನು ರಚಿಸಬೇಕು. ಪ್ರಸ್ತುತ ಸಮಾಜದಲ್ಲಿ ನಡೆದಿರುವ ಶೋಷಣೆ, ಅನ್ಯಾಯ ಮತ್ತು ತಾರತಮ್ಯ ಕಡಿಮೆ ಮಾಡುವಂಥ ಶಕ್ತಿ ಸಾಹಿತ್ಯಕ್ಕಿದೆ ಎಂದು ಪ್ರತಿಪಾದಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ದೇಶಭಕ್ತರು ಕವನಗಳನ್ನು ಬರೆದಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿವೆ. ವಿದ್ಯಾರ್ಥಿಗಳು ಕವನ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಹಂಗರಗೆ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಇಂಥ ಕಾರ್ಯಕ್ರಮ ನಿರಂತರ ಆಯೋಜಿಸಬೇಕು. ಚುಟುಕುಗಳ ಮೂಲಕ ಸಮಾಜದಲ್ಲಿರುವ ಅನ್ಯಾಯ ಖಂಡಿಸಲು ಪ್ರಯತ್ನಿಸಬೇಕು. ಮನಮುಟ್ಟುವಂಥ ಕವಿತೆಗಳ ರಚನೆ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳು ಹೆಸರುವಾಸಿಯಾಗಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕ ಎಸ್.ವಿ. ಕಲ್ಮಠ ಮಾತನಾಡಿ, ರಾಗದಿಂದ ರೋಗ ನಿವಾರಣೆಯಾಗುತ್ತದೆ. ಗೀತೆಗಳನ್ನು ಹಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಂಗೀತಕ್ಕೆ ಮಳೆ ಸುರಿಸುವ ಶಕ್ತಿಯಿದೆ. ಹೀಗಾಗಿ ಪಾಶ್ಚಿಮಾತ್ಯರು ಕೂಡ ಭಾರತೀಯ ಸಂಗೀತಕ್ಕೆ ಮೊರೆ ಹೋಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಬೀದರ್ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ.ರಾಮಚಂದ್ರ ಗಣಾಪುರ ಮಾತನಾಡಿ, ಸಾಹಿತ್ಯ ಮತ್ತು ಸಂಗೀತ ಸೇರಿದರೆ ಹೂವಿಗೆ ಪರಿಮಳ ಬಂದಂತಾಗುತ್ತದೆ. ಎಲ್ಲರಲ್ಲೂ ಕವನ ರಚಿಸುವ ಸಾಮಥ್ರ್ಯ ಇರುತ್ತದೆ. ಅದನ್ನು ಗುರುತಿಸುವ ಕೆಲಸ ಆಗಬೇಕು ಎಂದರು.

ಉಪ ಪ್ರಾಚಾರ್ಯ ಅನೀಲಕುಮಾರ ಚಿಕ್ಕಮಣೂರ, ಪ್ರಮುಖರಾದ ವೀರಭದ್ರಪ್ಪ ಉಪ್ಪಿನ್, ಮಹಾರುದ್ರ ಡಾಕುಳಗೆ, ಡಾ.ಶಶಿಧರ ಪಾಟೀಲ್, ಮಾನಾ ಸಂಗೀತಾ ಇತರರಿದ್ದರು.

ಕನ್ನಡ ಸ್ನಾತಕ್ಕೋತ್ತರ ವಿಭಾಗದ ಮುಖ್ಯಸ್ಥೆ ಡಾ.ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಸ್ನಾತಕ ವಿಭಾಗದ ಮುಖ್ಯಸ್ಥೆ ಡಾ.ಮಹಾನಂದ ಮಡಕಿ ಸ್ವಾಗತಿಸಿದರು. ಮಲ್ಲಯ್ಯ ಮಠಪತಿ ನಿರೂಪಣೆ ಮಾಡಿದರು. ಡಾ.ಸಂಗಪ್ಪ ತೌಡಿ ವಂದಿಸಿದರು. ನಗರದ ವಿವಿಧ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕವನ ವಾಚನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net