

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಹಿಂಬಾಗಿಲಿನಿಂದ ಅಧಿಕಾರಕ್ಕೇರಲು ಹಾಲಿ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಕ್ರಮ ಮಾರ್ಗ ಹಿಡಿದಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಮಾಳಗೆ ಆರೋಪಿಸಿದ್ದಾರೆ.
ಸಂಘದ ಕರಡು ಮತದಾರರ ಪಟ್ಟಿಯನ್ನು ನಿಯಮನುಸಾರ ಮೂರು ತಿಂಗಳ ಹಿಂದೆ ಪ್ರಕಟಿಸಬೇಕಿತ್ತು. ಆದರೆ ಈವರೆಗೆ ಪ್ರಕಟಿಸದೆ ಜಿಲ್ಲೆಯ ನೌಕರರನ್ನು ಕತ್ತಲಲ್ಲಿಟ್ಟಿದ್ದಾರೆ. ಐದು ದಿನಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮತದಾರರ ಮತ್ತು ಕ್ಷೇತ್ರಗಳ ವಿವರ ತಿಳಿಯದೆ ನೌಕರರು ಆತಂಕದಲ್ಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ನೌಕರರ ಹೆಸರು ಮತಪಟ್ಟಿಯಿಂದ ತೆಗೆದು ಹಾಕುವುದಾಗಿ ಹೆದರಿಸುತ್ತಿದ್ದಾರೆ. ಈ ಕುರಿತು ಸಂಘದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ರಾಜಾರೋಷವಾಗಿ ಗಂದಗೆ ಕೃತ್ಯಗಳು ಮುಂದುವರಿದಿವೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅ.28ರಿಂದ ಆರಂಭವಾಗಬೇಕು. ಆದರೆ ಚುನಾವಣಾಧಿಕಾರಿ ಕಚೇರಿ ತೆರೆದಿಲ್ಲ. ಜಿಲ್ಲಾ ಚುನಾವಣಾಧಿಕಾರಿ ಯಾರೆಂಬುದು ಗೊತ್ತಿಲ್ಲ ಎಂದು ದೂರಿದ್ದಾರೆ.
ಗಂದಗೆ ತಮಗೆ ಬೇಕಾದವರ ನಾಮಪತ್ರ ಮೇಲೆ ನೌಕರರಿಂದ ಅಕ್ರಮವಾಗಿ ಸಹಿ ಪಡೆಯುತ್ತಿದ್ದಾರೆ. ಅವರಿಗೆ ಮಾತ್ರ ನಾಮಪತ್ರದ ನಮೂನೆ ಯಾರು ಕೊಟ್ಟರು? ಎಲ್ಲಿಂದ ತಂದರು? ತೆರೆಮರೆಯಲ್ಲಿ ಇಂಥ ಮೋಸ ನಡೆದಿದ್ದು, ತಕ್ಷಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.