

ಬೀದರ್: ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ನೆಮ್ಮದಿ ಜೀವನ ಸಾಗಿಸಬೇಕು ಎಂದು ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಉಪಾಧ್ಯಕ್ಷ ತರುಣ ನಾಗಮಾರಪಳ್ಳಿ ಹೇಳಿದರು.
ಗಾಂಗಂಜ್ ಬ್ಯಾಂಕ್ನ ಸುವರ್ಣ ಮಹೋತ್ಸವ ನಿಮಿತ್ತ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿದ ಅವರು, ಇಂದಿನ ಆಹಾರ ಪದ್ಧತಿ, ಮಾನಸಿಕ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ವಿವಿಧ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹೀಗಾಗಿ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೋರಿದರು.
ಉದ್ಯಮಿ ವಿಶ್ವನಾಥ ಕಾಜಿ ಅಧ್ಯಕ್ಷತೆ ವಹಿಸಿದ್ದರು. ಗಾಂಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ್, ಉದ್ಯಮಿಗಳಾದ ಸೋಮಶೇಖರ ಪಾಟೀಲ್ ಗಾದಗಿ, ಅಶೋಕ ರೇಜಂತಲ್, ಅಭಿನವ ಗಾದಾ, ಆಸ್ಪತ್ರೆ ನಿರ್ದೇಶಕ ಸಂಜು ಸಿದ್ದಾಪುರ, ಪ್ರಮುಖರಾದ ಕಾಶಿನಾಥ ಶೆಟಕಾರ್, ಜಯರಾಜ ಖಂಡ್ರೆ, ಜೈಕುಮಾರ ಕಾಂಗೆ ಇತರರಿದ್ದರು. ನಾಗಮಾರಪಳ್ಳಿ ಆಸ್ಪತ್ರೆ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.