ಕಿತ್ತೂರು ಚನ್ನಮ್ಮ ಭಾವಚಿತ್ರದ ಭವ್ಯ ಮೆರವಣಿಗೆ

Channamma Jayanti-2
Published on

ಬೀದರ್: ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ನಗರದಲ್ಲಿ ಬುಧವಾರ ಅಲಂಕೃತ ವಾಹನದಲ್ಲಿ ಚನ್ನಮ್ಮ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಪುಷ್ಪಗಳಿಂದ ಸಿಂಗರಿಸಿದ್ದ ವಾಹನದಲ್ಲಿ ಚನ್ನಮ್ಮ ಅವರ ಬೃಹತ್ ಭಾವಚಿತ್ರ ಇಡಲಾಗಿತ್ತು. ವಾಹನದ ಆಚೆ-ಈಚೆ ಎರಡು ಕುದುರೆಗಳ ಮೇಲೆ ಚನ್ನಮ್ಮ ವೇಷ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಕುಳಿತಿದ್ದ ರೋಶಿನಿ ಮಾಳಗೆ ಹಾಗೂ ಸೌಮ್ಯ ಮುಗಟೆ ಗಮನ ಸೆಳೆದರು.

200ನೇ ಜಯಂತಿ ಅಂಗವಾಗಿ 200 ಮಕ್ಕಳು ಚನ್ನಮ್ಮ ಅವರ ವೇಷ ಧರಿಸಿ ಪಾಲ್ಗೊಂಡು, ಮೆರವಣಿಗೆಗೆ ವಿಶೇಷ ಕಳೆ ನೀಡಿದರು. ಡಂಬಲ್ಸ್, ಲೇಜಿಮ್, ಶಾಲಾ ಬ್ಯಾಂಡ್ ಮೊದಲಾದವು ಮೆರವಣಿಗೆಯ ಆಕರ್ಷಣೆಯಾಗಿದ್ದವು.

ಬಸವನಗರ ವಿಕಾಸ ಸಮಿತಿ, ಕಿತ್ತೂರು ಚನ್ನಮ್ಮ ಬಡಾವಣೆ, ವಿದ್ಯಾನಗರ ವಿಕಾಸ ಸಮಿತಿ ಹಾಗೂ ಹಾರೂರಗೇರಿ ಬಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಬಸವನಗರದ ಬಸವೇಶ್ವರ ದೇವಸ್ಥಾನದ ಬಳಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್ ಹಾಗೂ ಬಿ.ವಿ. ಭೂಮರಡ್ಡಿ ಕಾಲೇಜು ಪ್ರಾಚಾರ್ಯ ಡಾ. ವಿಠ್ಠಲರೆಡ್ಡಿ ಜಂಟಿಯಾಗಿ ಚಾಲನೆ ನೀಡಿದರು.

ಅಲ್ಲಿಂದ ಮೆರವಣಿಗೆ ಬಸವನಗರ, ಕಾಳಿದಾಸ ನಗರ ಮಾರ್ಗವಾಗಿ ಸಾಗಿ, ರಾಣಿ ಚನ್ನಮ್ಮ ವೃತ್ತಕ್ಕೆ ತಲುಪಿ ಸಮಾರೋಪಗೊಂಡಿತು. ನಂತರ ವೃತ್ತದಲ್ಲಿ ವೇದಿಕೆ ಸಮಾರಂಭ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net