

ಬೀದರ್: ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು ಎಂದು ಸಾಹಿತಿ ರಜಿಯಾ ಬಳಬಟ್ಟಿ ನುಡಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಚನ್ನಮ್ಮ ಅವರ 200ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರ ಆಡಳಿತದ ವಿರುದ್ಧ ಬಂಡಾಯವೆದ್ದ ಮೊದಲ ಆಡಳಿತಗಾರ್ತಿ ರಾಣಿ ಚನ್ನಮ್ಮ ಎಂದು ಅವರು ಬಣ್ಣಿಸಿದರು.
ಭಾರತದ ರಾಜವಂಶಗಳ ಅನೇಕ ರಾಣಿಯರ ಸಾಹಸ, ಶೌರ್ಯದ ಕತೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅವರಲ್ಲಿ ಚನ್ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕೆಯಾಗಿದ್ದರು ಎಂದು ತಿಳಿಸಿದರು.
ಬಾಲ್ಯದಿಂದಲೇ ಕತ್ತಿ ವರಸೆ, ಬಿಲ್ವಿದ್ಯೆ, ಕುದರೆ ಸವಾರಿ ಮೊದಲಾದವುಗಳನ್ನು ಕಲಿತಿದ್ದ ಚನ್ನಮ್ಮ ವೀರರಾಣಿಯಾಗಿ ಹೊರ ಹೊಮ್ಮಿದರು. ಮಾತೃ ಭೂಮಿ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಸಮಿತಿಯ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ರಾಣಿ ಚನ್ನಮ್ಮ ಉದ್ಯಾನದಲ್ಲಿ ಬರುವ ದಿನಗಳಲ್ಲಿ ಚನ್ನಮ್ಮ ಅವರ ಬೃಹತ್ ಕಂಚಿನ ಪ್ರತಿಮೆ ಸ್ಥಾಪಿಸುವ ಯೋಜನೆ ಇದೆ ಎಂದು ಹೇಳಿದರು.
ಹೆಣ್ಣುಮಕ್ಕಳು ಚನ್ನಮ್ಮರ ಶೌರ್ಯ, ಸಾಹಸದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು. ಬಸವನಗರ ಮಹಿಳಾ ಮಂಡಳ ಅಧ್ಯಕ್ಷೆ ರತ್ನಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್, ನಗರಸಭೆ ಸದಸ್ಯರಾದ ಪ್ರೀತಿ ರಾಜೇಶ, ಸಂತೋಷಿ ಅರುಣಕುಮಾರ, ದಿಗಂಬರ ಮಡಿವಾಳ, ಹಾರೂರಗೇರಿ ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಬಸವನಗರ ವಿಕಾಸ ಸಮಿತಿಯ ಅಧ್ಯಕ್ಷ ಶರಣಪ್ಪ ಹೋತಪೇಟ, ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ ಅಧ್ಯಕ್ಷ ಚಂದ್ರಶೇಖರ ತಾಂಡೂರೆ, ವಿದ್ಯಾನಗರ ವಿಕಾಸ ಸಮಿತಿಯ ಪ್ರಮುಖರಾದ ಶಿವಕುಮಾರ ಭಾಲ್ಕೆ, ಬಸವಣಪ್ಪ ನೇಳಗೆ, ರಮೇಶ ಭಾಲ್ಕೆ, ಪ್ರಕಾಶ ನಿಂಗದಳ್ಳಿ, ಓಂಕಾರ ಮಾಶೆಟ್ಟಿ, ಸಂತೋಷಕುಮಾರ ಮಂಗಳೂರೆ ಇದ್ದರು.
ವೀಣಾ ಮಾಶೆಟ್ಟಿ ನಿರೂಪಿಸಿದರು. ಓಂಕಾರ ಮಾಶೆಟ್ಟಿ ವಂದಿಸಿದರು.
ಮೂವರು ಸಾಧಕಿಯರಿಗೆ ಚನ್ನಮ್ಮ ಪ್ರಶಸ್ತಿ
ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಮೂವರು ಸಾಧಕಿಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಜಿಯಾ ಬಳಬಟ್ಟಿ (ಸಾಹಿತ್ಯ ಕ್ಷೇತ್ರ), ರಾಣಿ ಸತ್ಯಮೂರ್ತಿ (ಭರತನಾಟ್ಯ) ಹಾಗೂ ಬಸವಭಾಗ್ಯ ಸಜ್ಜನಶೆಟ್ಟಿ (ಕಾಯಕ ಕ್ಷೇತ್ರ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.