ಸೋಯಾ ನೋಂದಣಿ ಅವಧಿ ವಿಸ್ತರಿಸಿ

Rait sang
Published on

ಬೀದರ್: ಬೆಂಬಲ ಬೆಲೆ ಯೋಜನೆಯಡಿ ಸ್ಥಾಪಿಸಿರುವ ಖರೀದಿ ಕೇಂದ್ರಗಳಲ್ಲಿ ಸೋಯಾಬೀನ್ ನೋಂದಣಿ ಅವಧಿ ವಿಸ್ತರಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ.

ನಗರದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಬರೆದ ಮನವಿಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿ, ಜಿಲ್ಲಾದ್ಯಂತ ಮಳೆ ಬರುತ್ತಿರುವ ಕಾರಣ ಸೋಯಾ ರಾಶಿ ಮಂದಗತಿಯಲ್ಲಿ ನಡೆದಿದೆ. ಆದರೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ನಿಲ್ಲಿಸಲಾಗಿದೆ. ಬಹಳಷ್ಟು ರೈತರು ಸೋಯಾ ರಾಶಿಯಾಗದ್ದರಿಂದ ನೋಂದಣಿ ಮಾಡಿಲ್ಲ. ಹೀಗಾಗಿ ಒಂದು ತಿಂಗಳವರೆಗೆ ಅವಧಿ ವಿಸ್ತರಿಸುವಂತೆ ಒತ್ತಾಯಿಸಿದೆ.

ಉದ್ದು ರಾಶಿ ವೇಳೆ ನಿರಂತರ ಮಳೆ ಬಂದಿದ್ದರಿಂದ ಬೆಳೆ ನಾಶವಾಗಿದೆ. ರೈಗೆ ಬಂದಂಥ ತುತ್ತು ಬಾಯಿಗೆ ಬರದಂತಾಗಿದೆ. ಸಮೀಕ್ಷೆ ಮಾಡಿ ಉದ್ದು ಬೆಳೆ ಹಾನಿಯಾದಂಥ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಬೇಕು. ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಬೆಲೆ ನಿಗದಿಗೊಳಿಸಬೇಕು. ಬಂದ್ ಆಗಿರುವ ಜಿಲ್ಲೆಯ ಬಿಎಸ್ಎಸ್ಕೆ ಹಾಗೂ ಚಿಂಚೋಳಿಯಲ್ಲಿನ ಸಿದ್ಧಸಿರಿ ಕಾರ್ಖಾನೆ ಆರಂಭಿಸಬೇಕು. ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಸಮೀಕ್ಷೆ ಮಾಡಿ ಪರಿಹಾರ ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದೆ.

ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಶಂಕ್ರೆಪ್ಪ ಪಾರಾ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡಿ, ಸುವರ್ಣಾ ಬಳತೆ, ಮಹಾನಂದಾ ದೇಶಮುಖ, ಶೋಭಾವತಿ ಕಾರಬಾರಿ, ಸುಭಾಷ ರಗಟೆ, ಪ್ರವೀಣ ಕುಲಕರ್ಣಿ, ಬಾಬುರಾವ ಜೋಳದಾಬಕಾ, ರೇವಣಸಿದ್ದಪ್ಪ ಯರಬಾಗ, ನಾಗಯ್ಯಾ ಸ್ವಾಮಿ, ಪ್ರಕಾಶ ಬಾವಗೆ, ಶಿವಾನಂದ ಹುಡಗೆ, ಮಲ್ಲಿಕಾರ್ಜುನ ಚಕ್ಕಿ, ಸುಮಂತ ಗ್ರಾಮಲೆ, ಉಮಾಕಾಂತ ತೋರಣಾ, ಝರಣಪ್ಪ ದೇಶಮುಖ, ಧೂಳಪ್ಪ ಸೋರಳ್ಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net