

ಬೀದರ್: ಭಾರತ ಮತ್ತೆ ವೈಭವದಿಂದ ಮೆರೆಯಬೇಕು. ಗುರುವಿನ ಸ್ಥಾನದಲ್ಲಿ ನಿಂತು ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡಬೇಕು ಎಂಬುದೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಮುಖ್ಯ ಧ್ಯೇಯವಾಗಿದೆ ಎಂದು ಸಂಘದ ಜಿಲ್ಲಾ ವ್ಯವಸ್ಥಾ ಪ್ರಮುಖ ಬಸವರಾಜ ನಿಂಬೂರೆ ಹೇಳಿದರು.
ಸಂಘದ ಬೀದರ್ ನಗರ ಘಟಕದಿಂದ ಇಲ್ಲಿನ ಸರಸ್ವತಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಬೌದ್ಧಿಕ ನೀಡಿದ ಅವರು, ಭಾರತಾಂಬೆ ಗೌರವ ಹೆಚ್ಚಿಸಲು ಸಂಘ ಸಕ್ರಿಯ ಕೆಲಸ ಮಾಡುತ್ತಿದೆ. ಬರುವ ವರ್ಷದ ವಿಜಯದಶಮಿಗೆ ಸಂಘದ ಶತಮಾನೋತ್ಸವ ಸಂಭ್ರಮ. ಕಳೆದ 99 ವರ್ಷಗಳಲ್ಲಿ ಸಂಘ ಸಮಾಜ, ದೇಶಕ್ಕಾಗಿ ಮಾಡಿದ ಕೆಲಸ-ಕಾರ್ಯಗಳು ಅಮೋಘ, ಅವಿಸ್ಮರಣೀಯ. ಸಂಘದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುವುದೇ ಭಾರತೀಯರಿಗೆ ಸಿಕ್ಕಿರುವ ದೊಡ್ಡ ಸೌಭಾಗ್ಯ ಎಂದರು.
ನಾನೊಬ್ಬ ಹಿಂದು ಎಂದು ಸಹ ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಡಾ.ಹೆಡಗೇವಾರ್ ಸಂಘ ಆರಂಭಿಸಿದರು. ಸಂಘ ತನ್ನ ತತ್ವ, ಚಿಂತನೆ, ಕಾರ್ಯಪದ್ಧತಿ, ಸಿದ್ಧಾಂತಗಳಿಂದ ಎಂದೂ ವಿಮುಖಗೊಂಡಿಲ್ಲ. ಜಾತಿ, ಧರ್ಮ, ಭಾಷೆ, ಪ್ರಾಂತಕ್ಕಿಂತಲೂ ಸಂಘಕ್ಕೆ ದೇಶ ಮುಖ್ಯ. ಭಾರತ ವೈಭವಕ್ಕೆ ಏನು ಬೇಕೋ ಅದನ್ನು ಮಾಡಲು ಸೇವೆ, ತ್ಯಾಗದಿಂದ ಪ್ರತಿಯೊಬ್ಬ ಸ್ವಯಂಸೇವಕ ದುಡಿಯುತ್ತಿದ್ದಾನೆ. ಕೆಲವರು ಸ್ವಾರ್ಥಕ್ಕಾಗಿ ಸಂಘವನ್ನು ಟೀಕಿಸುತ್ತಿದ್ದಾರೆ. ದೇಶದ ಹಿತಕ್ಕಾಗಿ ದುಡಿಯುತ್ತಿರುವವರು ಇಂಥ ಯಾವುದೇ ಆರೋಪ, ಟೀಕೆಗಳಿಗೆ ಜಗ್ಗಲ್ಲ. ಸಂಘದ ಗುರಿ, ಉದ್ದೇಶ ಸ್ಪಷ್ಟವಿದೆ. ದೇಶವನ್ನು ಪ್ರೀತಿಸುವವರು ಸಂಘ ಪ್ರೀತಿಸುತ್ತಾರೆ ಎಂದು ಪ್ರತಿಪಾದಿಸಿದರು.
ಭಾರತ ಅನೇಕ ದಾಳಿಗಳನ್ನು ಕಂಡಿದೆ. ನಮ್ಮ ಸಂಸ್ಕೃತಿ, ಪರಂಪರೆ ನಾಶಕ್ಕೆ ನಿರಂತರ ಯತ್ನಿಸಲಾಗಿದೆ. ಹಲವಾರು ಸಂಕಷ್ಟ, ಸವಾಲುಗಳನ್ನು ಸಮರ್ಥವಾಗಿ ದಾಟಿ ಮತ್ತೆ ಗಟ್ಟಿಯಾಗಿ ನಿಂತಿದ್ದೇವೆ. ಇದಕ್ಕೆಲ್ಲ ನಮ್ಮ ಧರ್ಮ, ಅಧ್ಯಾತ್ಮ, ಭಕ್ತಿಯ ಶಕ್ತಿಯೇ ಕಾರಣ. ಈಗ ಮತ್ತೆ ಭಾರತ ಅನೇಕ ಸಾಧನೆ ಮಾಡುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಬಲಿಷ್ಠವಾಗಿ ವಿಶ್ವದಲ್ಲಿ ತನ್ನ ಛಾಪು ಮೂಡಿಸಿಕೊಳ್ಳುತ್ತಿದೆ. ಇಡೀ ವಿಶ್ವಕ್ಕೆ ಬೆಳಕಿನ ಅಗತ್ಯವಿದೆ. ಈ ಬೆಳಕು ಭಾರತ ಮಾತ್ರ ಕೊಡಬಲ್ಲದ್ದು ಎಂದು ಸ್ವಾಮಿ ವಿವೇಕಾನಂದ ಹೇಳಿರುವಂಥ ಮಾತು ಶತಮಾನದ ಬಳಿಕ ನನಸಾಗುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದರು.
ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳಬೇಕು. ಮಹಾಪುರುಷರನ್ನು ಯಾವುದೇ ಜಾತಿ, ಕುಲಕ್ಕೆ ಸೀಮಿತಗೊಳಿಸಬಾರದು. ಇಡೀ ಸಮಾಜ ಒಂದಾಗಿ ಸಾಮರಸ್ಯದಿಂದ ಹೆಜ್ಜೆ ಹಾಕಬೇಕಿದೆ. ಪ್ರತಿ ಮನೆಯಿಂದಲೇ ಸಂಸ್ಕಾರ ಬೆಳೆಯಬೇಕು. ಧರ್ಮವೇ ಈ ದೇಶದ ಪ್ರಾಣ. ಧರ್ಮದ ನೆಲೆಗಟ್ಟಿನಲ್ಲೇ ಬದುಕು ಸಾಗಬೇಕು ಎಂದರು.
ಧರ್ಮದ ಆಧಾರದಲ್ಲೇ ಭಾರತ ವಿಭಜನೆಯಾಗಿದ್ದನ್ನು ನಾವ್ಯಾರೂ ಮರೆಯಕೂಡದು. ಭಾರತ ಹಿಂದುಗಳ ಪವಿತ್ರ ರಾಷ್ಟ್ರ. ಇಲ್ಲಿ ಹಿಂದುಗಳ ಹಬ್ಬ, ಉತ್ಸವ ವಿರೋಧಿಸುವ ಬೆಳವಣಿಗೆ ನಡೆಯುತ್ತಿರುವುದು ಸಮರ್ಥನೀಯವಲ್ಲ. ಹಿಂದು ಸಮಾಜ ಇನ್ನಾದರೂ ಎಚ್ಚರಗೊಂಡು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಶರಣಬಸವೇಶ್ವರ ಕಾಲೇಜಿನ ಪ್ರಾಚಾರ್ಯ ಡಾ.ಸತೀಶ ಪರತಾಪುರ ಮಾತನಾಡಿದರು. ಆರ್ಎಸ್ಎಸ್ ವಿಭಾಗ ಸಂಘಚಾಲಕ ಹನುಮಂತರಾವ ಪಾಟೀಲ್, ಜಿಲ್ಲಾ ಸಂಘಚಾಲಕ ಶಿವರಾಜ ಹಲಶೆಟ್ಟಿ, ಪ್ರಮುಖರಾದ ಶಿವಲಿಂಗ ಕುಂಬಾರ, ನಾಗೇಶರೆಡ್ಡಿ, ಎನ್.ಕೃಷ್ಣಾರೆಡ್ಡಿ, ಮಾರುತಿರಾವ ಪಂಚಭಾಯಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಇತರರಿದ್ದರು.