ಬೆಳಗು ಸಂಗೀತ ಸಂಜೆ 27ರಂದು

anilkumar deshmukh
Published on

ಬೀದರ್: ಬೆಳಗು ಸಾಂಸ್ಕೃತಿಕ ಹಾಗೂ ಸಾಮಾಜಿಕ ಟ್ರಸ್ಟ್ ನಿಂದ ಅ.27ರಂದು ಸಂಜೆ 5ಕ್ಕೆ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬೆಳಗು ಸಂಗೀತ ಸಂಜೆ-2024 ಆಯೋಜಿಸಲಾಗಿದೆ.

ಸ್ಥಳೀಯ ಕಲಾವಿದರಿಗೆ ಉತ್ತೇಜನ ಮತ್ತು ಸಾರ್ವಜನಿಕರಿಗೆ ಸಂಗೀತ ರಸದೌತಣ ಉಣಬಡಿಸಲು ಸುಮಾರು ಮೂರು ಗಂಟೆಯ ಸಂಗೀತ ಸಂಜೆ ಏರ್ಪಡಿಸಲಾಗಿದೆ. ಕಲಾವಿದರು ಸುಶ್ರಾವ್ಯ ಕಂಠದಿಂದ ಗಾನಲಹರಿ ಹರಿಸಲಿದ್ದಾರೆ ಎಂದು ಬೆಳಗು ಟ್ರಸ್ಟ್ ಅಧ್ಯಕ್ಷ ಅನೀಲಕುಮಾರ ದೇಶಮುಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಗೀತ ನಿರ್ದೇಶಕರಾದ ವೀರ ಸಮರ್ಥ, ಗುರುದೇವ (ಶ್ರೀಗುರು), ಗಾಯಕರಾದ ಮಹೇಶ್ವರಿ ಪಾಂಚಾಳ, ಆಬೀದ್ ಅಲಿ ಖಾನ್, ಅರುಣ್ ಕಾರ್ನಾಡ್, ಪ್ರಿಯಂಕಾ ಗುರುದೇವ, ನಾಗಶೆಟ್ಟಿ ಲಕೋಟಿ, ಡಾ.ವಿ.ವಿ. ನಾಗರಾಜ್, ಮಲ್ಲಿಕಾರ್ಜುನ ಶೀಲವಂತ, ರವಿ ಮೂಲಗೆ, ಅನೀಲ ಮಜಗೆ, ಅನೀಲಕುಮಾರ ದೇಶಮುಖ ಇತರರು ಗಾನಸುಧೆ ಹರಿಸುವರು. ಸೊಲ್ಲಾಪುರದ ಮಹ್ಮದ್ ಜಬ್ಬಾರ್ ಅವರ ಆರ್ಕೆಸ್ಟ್ರಾ ತಂಡದ ನೇರ ವಾದ್ಯಮೇಳದೊಂದಿಗೆ ಗಾಯಕರ ಹಾಡುಗಾರಿಕೆ ಸಂಗೀತ ಸಂಜೆ ಸುಮಧುರತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ಸಂಜೆ 5ಕ್ಕೆ ಸಂಗೀತ ಸಂಜೆಯನ್ನು ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು ಉದ್ಘಾಟಿಸುವರು. ಹಿರಿಯ ಟ್ರಸ್ಟಿ ಗುರುನಾಥ ಕೊಳ್ಳುರ್ ಅಧ್ಯಕ್ಷತೆ ವಹಿಸುವರು. ತಾದಲಾಪುರ ದತ್ತಾನಂದ ಸಂಸ್ಥಾನದ ಅಧ್ಯಕ್ಷ ವೈಕುಂಠದತ್ತ ಮಹಾರಾಜ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಉಚಿತ ಪ್ರವೇಶವಿದ್ದು, ಸಾರ್ವಜನಿಕರು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಗಡಿ ಜಿಲ್ಲೆಯ ಕಲಾವಿದರಿಗೆ ಉತ್ತೇಜನ ನೀಡುವುದು, ನಿರಂತರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆ ನಡೆಸುವ ಧ್ಯೇಯದಿಂದ 2017ರಲ್ಲಿ ಸಮಾನ ಮನಸ್ಕ ಸಂಗೀತ ಪ್ರೇಮಿಗಳು ಸೇರಿ ಬೆಳಗು ಟ್ರಸ್ಟ್ ಸ್ಥಾಪಿಸಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net