

ಬೀದರ್: ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಬಹಳಷ್ಟು ಪ್ರಾಮುಖ್ಯ ಪಡೆದುಕೊಂಡಿದೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರೇಮಸಾಗರ ದಾಂಡೇಕರ್ ಹೇಳಿದರು.
ನಗರದಲ್ಲಿ ಆನಂದ ನಗರ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ವರ್ಷವಾಸ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣಕ್ಕೆ ಆದ್ಯತೆ ನೀಡಿ ಮೌಢ್ಯಗಳಿಂದ ದೂರವಿರಬೇಕು. ಅಜ್ಞಾನ ಎಂಬ ಕತ್ತಲೆಯಿಂದ ದೂರ ಸರಿದು ಜ್ಞಾನ ಎಂಬ ಬೆಳಕಿನಡೆಗೆ ಸಾಗಿ ಡಾ.ಅಂಬೇಡ್ಕರ್ ಕಂಡ ಕನಸು ನನಸಾಗಿಸಬೇಕು ಎಂದರು.
ಕೇವಲ ಸರ್ಕಾರಿ ಹುದ್ದೆಗಳಿಗೆ ಶಿಕ್ಷಣ ಸೀಮಿತಗೊಳಿಸಬಾರದು. ಶಿಕ್ಷಣದಿಂದ ಸಾಮಾಜಿಕ ಮತ್ತು ರಾಜಕೀಯವಾಗಿ ಯುವ ಸಮೂಹ ಮುಂದೆ ಬರಬೇಕು. ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು. ದೇಶದಲ್ಲಿ ಮತ್ತೆ ಬುದ್ಧನ ಕಾಲದ ಶಾಸನವಾಗಬೇಕು. ಪ್ರತಿಯೊಬ್ಬರಲ್ಲಿ ದಯೆ, ಕರುಣೆ, ಪ್ರೀತಿ ವಿಶ್ವಾಸ ಮೂಡಿಸಿ ಸಮಾನತೆ ತರುವ ಅಗತ್ಯವಿದೆ. ಎಲ್ಲರಿಗೂ ಸಮಾನ ಹಕ್ಕುಗಳನ್ನು ಸಂವಿಧಾನ ನೀಡಿದೆ. ಹೀಗಾಗಿ ಬಾಬಾಸಾಹೇಬರು ಕಂಡ ಕನಸಿನಂತೆ ಪರಿಶಿಷ್ಟರು ದೇಶವನ್ನಾಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವೈಶಾಲಿನಗರದ ಪೂಜ್ಯ ಜ್ಞಾನಸಾಗರ ಭಂತೆ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷ ಎಂ.ಡಿ. ಗೌಸ್, ಪ್ರಮುಖರಾದ ಅನೀಲಕುಮಾರ ಬೆಲ್ದಾರ್, ವಿನೋದಕುಮಾರ ಬಂದ್ಗೆ, ಸಾಹಿತಿ ಶರಣು ಫುಲೆ, ಪಾಂಡುರಂಗ ಬೆಲ್ದಾರ್, ಶಿವಕುಮಾರ ಸದಾಫುಲೆ, ಮಾರುತಿ ಕಾಂಬ್ಳೆ, ಶಾರದಾಬಾಯಿ ಚೆನ್ಮಲ್ಮ ಇತರರಿದ್ದರು. ಡಾ.ಕಾಶಿನಾಥ ಚಲವಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಭಕ್ತ ನಿರೂಪಣೆ ಮಾಡಿದರು.