

ಬೀದರ್: ರಾಜ್ಯ ಸರ್ಕಾರ ಪಿಡಿಒಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘ ಒತ್ತಾಯಿಸಿದೆ. ಸಂಘದ ವಿಭಾಗೀಯ ಕಾರ್ಯದರ್ಶಿ ಉಮೇಶ ಕೆ. ಜಾಬಾ ಅವರು ನಗರದಲ್ಲಿ ಈಚೆಗೆ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು. ಗ್ರಾಮಾಭಿವೃದ್ಧಿಗೆ ಪಂಚಾಯಿತಿಗಳಲ್ಲಿ ಬಿ ವೃಂದದ ಅಧಿಕಾರಿ ಇರುವುದು ಅವಶ್ಯಕವಾಗಿದೆ. ಆದರೆ, ಹುದ್ದೆ ಉನ್ನತೀಕರಣ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗಮನ ಸೆಳೆದರು. 13 ವರ್ಷಗಳಿಂದ ಬಡ್ತಿಯೇ ಇಲ್ಲದ ಕಾರಣಕ್ಕಾಗಿ ಪಿಡಿಒಗಳು ನಿರುತ್ಸಾಹದಲ್ಲಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ 1,500 ಪಿಡಿಒ ಹುದ್ದೆಗಳನ್ನು ಹಿರಿಯ ಪಿಡಿಒ ಎಂದು ವರ್ಗೀಕರಿಸಿ, ಅವರ ಆತ್ಮವಿಶ್ವಾಸ ಇನ್ನಷ್ಟು ಕುಗ್ಗಿಸಲಾಗಿದೆ ಎಂದು ತಿಳಿಸಿದರು. ಒತ್ತಡದ ಕೆಲಸದ ಕಾರಣದಿಂದಾಗಿ ರಾಜ್ಯದಲ್ಲಿ 163 ಪಿಡಿಒಗಳು ಅಸಹಜ ಸಾವಿಗೀಡಾಗಿದ್ದಾರೆ. 129 ಪಿಡಿಒಗಳ ಮೇಲೆ ಹಲ್ಲೆ ನಡೆದಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ನೆಮ್ಮದಿಯಿಂದ ಕೆಲಸ ನಿರ್ವಹಿಸುವ ವಾತಾವರಣ ಸೃಷ್ಟಿಸಬೇಕಿದೆ ಎಂದು ಹೇಳಿದರು.