ವಿದ್ಯುತ್ ಉಪ ಕೇಂದ್ರ ಕಾಮಗಾರಿ ಕಳಪೆ

Nagur
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಔರಾದ್: ಸಾರ್ವಜನಿಕರಿಂದ ನಿರಂತರ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ್ ನಾಗೂರ(ಬಿ) ಗ್ರಾಮದಲ್ಲಿ ನಿರ್ಮಿಸುತ್ತಿರುವ 220 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದರು. ಕಾಮಗಾರಿ ಕಳಪೆ ಆಗುತ್ತಿರುವುದನ್ನು ಕಂಡು ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಉಪ ಕೇಂದ್ರದಲ್ಲಿ ಸಂಚರಿಸಿ ಸುತ್ತುಗೋಡೆ, ಟ್ರಾನ್ಸ್‌ಫಾರ್ಮರ್ ಯಂತ್ರ ಹಾಗೂ ಕಟ್ಟಡ ಕೆಲಸ ಸೇರಿ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದ ಶಾಸಕರು, ನಿರ್ಮಾಣ ಹಂತದ ಸುತ್ತುಗೋಡೆಯಲ್ಲಿ ಸಿಮೆಂಟ್ ಎದ್ದು ಕಾಣುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡರು. ಈ ಹಿಂದೆಯೂ ಕಳಪೆಯಾಗಿದ್ದ ಒಂದು ಸುತ್ತುಗೋಡೆಯನ್ನು ಕೆಡವಿ ಮತ್ತೆ ನಿರ್ಮಿಸಲಾಗುತ್ತಿದೆ. ಇದು ಸಹ ಸರಿಯಾಗಿ ಕ್ಯೂರಿಂಗ್ ಆಗಿಲ್ಲ. ಆರಂಭದಲ್ಲೇ ಹೀಗಾದರೆ ಮುಂದಿನ ಗತಿಯೇನು ಎಂದು ಬೇಸರ ಹೊರಹಾಕಿದರು.
ವೀಕ್ಷಣೆ ವೇಳೆ ಗೋಡೆ ಬುನಾದಿಯಲ್ಲಿ ಕಲ್ಲು-ಮಣ್ಣು ಎದ್ದು ಕಾಣಿಸುತ್ತಿತ್ತು. ಗೋಡೆಗೆ ಕೈತಾಕಿದ ಕೂಡಲೇ ಮಣ್ಣು ಉದುರಲು ಆರಂಭಿಸಿತು. ಕಟ್ಟಡದ ಸುತ್ತ ಇದೇ ಪರಿಸ್ಥಿತಿ ಇರುವುದನ್ನು ಕಂಡ ಅವರು, ಗುತ್ತಿಗೆದಾರರ ವಿರುದ್ಧ ಕೋಪಗೊಂಡರು. ಕೆಲಸ ಇಷ್ಟೊಂದು ಕಳಪೆಯಾಗುತ್ತಿದ್ದರೂ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಉಪ ಕೇಂದ್ರದಲ್ಲಿ ಅಳವಡಿಸಿದ ಯಂತ್ರಗಳು, ವಿದ್ಯುತ್ ತಂತಿ ಮತ್ತಿತರ ಉಪಕರಣಗಳ ಬಗ್ಗೆಯೂ ದೂರುಗಳಿವೆ. ಇವು ಹಳೆಯದಾಗಿದ್ದು, ಬಣ್ಣ ಬಳಿದು ಹೊಸದಾಗಿ ಕಾಣುವಂತೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಕುರಿತು ತಜ್ಞರಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಇಂಜಿನಿಯರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಚವ್ಹಾಣ್, ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರದ ಮೇಲೆ ನಿರಂತರ ಒತ್ತಡ ತಂದು 118 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಿಸಲಾಗುತ್ತಿದೆ. ಕೆಲಸ ಕಳಪೆ ಆಗುತ್ತಿದೆ ಎಂದು ಜನ ಆರೋಪಿಸುತ್ತಿದ್ದಾರೆ. ಒಮ್ಮೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಬೇಕು ಎಂದು ಕೋರಿದರು.
ಔರಾದ್ ಕ್ಷೇತ್ರದಲ್ಲಿ ಸಣ್ಣ-ಪುಟ್ಟ ಕಾರ್ಖಾನೆಗಳನ್ನು ಸ್ಥಾಪಿಸಬೇಕೆಂಬುದು ಬಹುದಿನದ ಆಶಯ. ಅದಕ್ಕೆ ಮುಖ್ಯವಾಗಿ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಕಲ್ಪಿಸಬೇಕು. ರಸ್ತೆ ಹಾಗೂ ಕುಡಿಯುವ ನೀರು ಪೂರೈಕೆಗೆ ಯೋಜನೆಗಳನ್ನು ತರಲಾಗಿದ್ದು, ಕೆಲಸಗಳು ನಡೆಯುತ್ತಿವೆ. ವಿದ್ಯುತ್ ಕೊರತೆ ನೀಗಿಸಲು ಸರ್ಕಾರದಿಂದ 220 ಕೆವಿ ವಿದ್ಯುತ್ ಉಪ ಕೇಂದ್ರ ಮಂಜೂರು ಮಾಡಿಸಿ ಕೆಲಸ ಆರಂಭಿಸಲಾಗಿದೆ. ಕಾಮಗಾರಿಯನ್ನು ಹೈದರಾಬಾದ್ ಮೂಲದ ಸಂಸ್ಥೆಗೆ ವಹಿಸಲಾಗಿದೆ. ಅವರು ಇಲ್ಲಿಗೆ ಬರುವುದೇ ಇಲ್ಲ. ನೇರವಾಗಿ ಕೆಲಸ ಮಾಡದೆ 3ನೇ ವ್ಯಕ್ತಿಯಿಂದ ಮಾಡಿಸುತ್ತಿದ್ದು, ಸಂಪೂರ್ಣ ಕಳಪೆಯಾಗಿದೆ. ಎರಡು ಬಾರಿ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ನಾಗೂರ(ಬಿ) ವಿದ್ಯುತ್ ಉಪ ಕೇಂದ್ರದ ಕಾಮಗಾರಿ ಬಗ್ಗೆ 3ನೇ ಪಾರ್ಟಿಯಿಂದ ಸಮಗ್ರ ತನಿಖೆಯಾಗಬೇಕು. ಇದಕ್ಕೆ ಒಂದು ತಿಂಗಳ ಕಾಲಾವಕಾಶ ನೀಡುವೆ. ಸರಿಪಡಿಸದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net