ದುಶ್ಚಟಗಳಿಂದ ಸಮಾಜದ ಸ್ವಾಸ್ಥ್ಯ ಹಾಳು

dharamshala sang
Published on

ಬೀದರ್: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ, ಯುವ ಪೀಳಿಗೆ ಮೋಜು-ಮಸ್ತಿಗಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಧಕ್ಕೆ ಆಗುತ್ತಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಅಕ್ಕ ಗಂಗಾಂಬಿಕೆ ಕಳವಳ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ಟ್ರಸ್ಟ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಇತರ ಸಂಘ-ಸಂಸ್ಥೆಗಳ ಸಹಯೋಗದಡಿ ನಗರದಲ್ಲಿ ಅ.25ರವರೆಗೆ ಹಮ್ಮಿಕೊಂಡಿರುವ 1857ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿದ ಅವರು, ಕೆಟ್ಟ ಚಟಗಳಿಂದ ದೂರವಾದರೆ ಮಾತ್ರ ಉತ್ತಮ ಆರೋಗ್ಯದೊಂದಿಗೆ ನೆಮ್ಮದಿಯಿಂದ ಜೀವಿಸಲು ಸಾಧ್ಯ ಎಂದರು.
ದುಶ್ಚಟಗಳನ್ನು ದೂರ ಮಾಡುವ ಉದ್ದೇಶದಿಂದ ಕ್ಷೇತ್ರ ಧರ್ಮಸ್ಥಳ ಇಂಥ ಶಿಬಿರಗಳನ್ನು ಏರ್ಪಡಿಸಿ ನೂರಾರು ಕುಟುಂಬಗಳಿಗೆ ನೆಮ್ಮದಿ ಬದುಕು ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ವಿರೂಪಾಕ್ಷ ಗಾದಗಿ ಮಾತನಾಡಿ, ಎಂಟು ದಿನದ ಶಿಬಿರದಲ್ಲಿ ನುರಿತ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆ ಜತೆಗೆ ಧರ್ಮಸ್ಥಳ ಯೋಜನೆ ವಿಷಯ ಪರಿಣತರಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ಯೋಗ ತರಬೇತಿ ಮೂಲಕ ದುಶ್ಚಟಗಳನ್ನು ಬಿಡಿಸಲಾಗುವುದು ಎಂದು ಹೇಳಿದರು.
ಮದ್ಯ ಸೇವನೆಯಿಂದ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಸ್ಥಿತಿ ಹಾಳಾಗಲಿದೆ. ಹೀಗಾಗಿ ಕುಡಿತದ ಚಟ ತ್ಯಜಿಸಿದವರು ನೆಮ್ಮದಿ ಜೀವನ ನಡೆಸಿ ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದು ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ ಎಂದರು.
ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಡಾ.ರಜನೀಶ್ ವಾಲಿ, ಡಾ.ಎಸ್.ಎಸ್. ಹಿರೇಮಠ, ಮಂಗಲಾ ಭಾಗವತ್ ಮಾತನಾಡಿದರು. ಶಿವು ಲೋಖಂಡೆ, ಬಸವರಾಜ ಬಶೆಟ್ಟಿ, ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ, ತಾಲೂಕು ಯೋಜನಾಧಿಕಾರಿ ಸಂಜಯ ನಾಯಕ್, ರಾಜೇಶ್ ಕೆ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net