ರಾಜ್ಯಾದ್ಯಂತ ಅಕ್ಷರ ಜ್ಯೋತಿಯಾತ್ರೆ

Basavakumar Patil
Published on

ಬೀದರ್: ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಹಾಗೂ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನ.7ರಿಂದ 2025ರ ಜ.10ರವರೆಗೆ ರಾಜ್ಯಾದ್ಯಂತ ಅಕ್ಷರ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್ ಹೇಳಿದರು.
ರಾಜ್ಯದ ವಿವಿಧೆಡೆ 63 ದಿನ ಯಾತ್ರೆ ಸಂಚರಿಸಲಿದೆ. ತುಮಕೂರು ಸಿದ್ಧಗಂಗಾ ಮಠದಿಂದ ಆರಂಭವಾಗಲಿರುವ ಅಕ್ಷರ ಜ್ಯೋತಿಯಾತ್ರೆಯು ಜ.10ರಂದು ಬೀದರ್ ನಲ್ಲಿ ಕೊನೆಗೊಳ್ಳಲಿದೆ. ರಾಜ್ಯದ 35 ಶೈಕ್ಷಣಿಕ ಜಿಲ್ಲೆ ಹಾಗೂ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲೂ ಸಂಚರಿಸಲಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಷ್ಠಾನ 2010ರಿಂದ ಬೀದರ್ ಸೇರಿ ಕಕ ಭಾಗದಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ನಡೆಸುತ್ತ ಬರುತ್ತಿದೆ. 2014ರಲ್ಲಿ ಅಕ್ಷರ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆಗಲೂ 60 ದಿನ ರಾಜ್ಯಾದ್ಯಂತ ಸಂಚರಿಸಿತ್ತು. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸದಾ ಕೊನೆಯ ಸ್ಥಾನದಲ್ಲಿರುತ್ತಿದ್ದ ಬೀದರ್ ಜಿಲ್ಲೆ ಫಲಿತಾಂಶ ಕೊಂಚ ಸುಧಾರಣೆಯಾಗಿ 25ನೇ ಸ್ಥಾನದ ಆಸುಪಾಸಿನಲ್ಲಿ ಬರಲು ಸಾಧ್ಯವಾಗಿದೆ. ಕರ್ನಾಟಕ ಸುವರ್ಣ ಸಂಭ್ರಮದಲ್ಲಿರುವ ಈ ವೇಳೆ ಜ್ಯೋತಿಯಾತ್ರೆ ಮಹತ್ವ ಪಡೆದುಕೊಂಡಿದೆ. ಎಸ್ಎಸ್ಎಲ್ಸಿ ಫಲಿತಾಂಶ ಒಂದಂಕಿಗೆ ತರುವ ಉದ್ದೇಶ ಮತ್ತು ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಧ್ಯೇಯದೊಂದಿಗೆ ಯಾತ್ರೆ ಆಯೋಜಿಸಲಾಗಿದೆ ಎಂದರು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ತಿರುವಿನ ಘಟ್ಟ ಎಂಬ ಕಾರಣಕ್ಕೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಹಂತಗಳಿಗೆ ಹೆಚ್ಚಿನ ಮಹತ್ವವಿದೆ. ಈ ಶಿಕ್ಷಣ ಮಕ್ಕಳು ಉತ್ತಮವಾಗಿ ಪಡೆದರೆ ಉನ್ನತ ಶಿಕ್ಷಣ ಅತ್ಯುತ್ತಮವಾಗಿ ಮುಂದುವರಿಯುತ್ತದೆ. ಇದು ದೇಶದ ಸಮೃದ್ಧ ಮಾನವ ಸಂಪನ್ಮೂಲ ಸೃಷ್ಟಿಸುವ ಸಮಯ. ಈ ಹಂತದಲ್ಲಿ ಸ್ವಲ್ಪ ಹೆಚ್ಚೂ-ಕಮ್ಮಿಯಾದರೂ ವಿದ್ಯಾಥರ್ಿಗಳು ಉದ್ದೇಶಿತ ಗುರಿಯಿಂದಲೇ ದೂರವಾಗಬಹುದು. ಹೀಗಾಗಿ ಈ ಅವಯಲ್ಲಿಯೇ ವಿದ್ಯಾರ್ಥಿಗಳಿಗೆ ಪ್ರೇರಣೆ, ಸರಿಯಾದ ಮಾರ್ಗದರ್ಶನ ಮತ್ತು ಸೂಕ್ತ ಸಮಾಲೋಚನೆ ಮೂಲಕ ಸರಿ ದಾರಿ ತೋರುವ ಅಗತ್ಯವಿದೆ ಎಂಬ ಕಾರಣಕ್ಕೆ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಮುಖರಾದ ಹಾವಶೆಟ್ಟಿ ಪಾಟೀಲ್, ಪಂಡಿತ ಬಾಳೂರೆ, ರಾಜೇಂದ್ರ ಮಣಗೇರಿ ಮಾತನಾಡಿದರು. ಸಿದ್ದಯ್ಯ ಕಾವಡಿ, ಶಿವರಾಜ ಮದಕಟ್ಟಿ, ಪ್ರಭು ತಟಪಟ್ಟಿ, ಶಿವಾಜಿರಾವ ಮಾನೆ, ಮನೋಜಕುಮಾರ ಬುಕ್ಕಾ, ರಾಜಕುಮಾರ ಧುಮ್ಮನಸುರೆ, ಪಂಚಾಕ್ಷರಿ, ಶೇಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net