

ಬೀದರ್: ರಾಮಾಯಣ ವಿಶ್ವದ ಶ್ರೇಷ್ಠ ಮಹಾಕಾವ್ಯ. ಸತ್ಯಮೇವ ಜಯತೆ, ದುಷ್ಟರ ಸಂಹಾರ-ಶಿಷ್ಟರ ರಕ್ಷಣೆ, ಪಿತೃವಾಕ್ಯ ಪರಿಪಾಲನೆ ಸಂದೇಶವಿರುವ ಹಾಗೂ ರಾಮರಾಜ್ಯ ಪರಿಕಲ್ಪನೆಯ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಚಿಂತನೆ ಸರ್ವಶ್ರೇಷ್ಠ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಡಿ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಸತ್ಯಮೇವ ಜಯತೆ ಸೇರಿ ಅನೇಕ ಮೌಲಿಕ ವಿಚಾರ ಹೊಂದಿರುವ ರಾಮಾಯಣ ಮಹಾ ಕಾವ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದರು.
ರಾಮಾಯಣ ಎಲ್ಲರಿಗೂ ಪ್ರೇರಣೆ. ಇತಿಹಾಸ ಹಾಗೂ ನಮ್ಮ ಸಂಸ್ಕೃತಿ ಬಗ್ಗೆ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಾಲ್ಮೀಕಿ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆ, ಸ್ಥಾನಮಾನ ಪಡೆಯಬೇಕು ಎಂದು ಆಶಿಸಿದರು.
ಸಂಸದ ಸಾಗರ್ ಖಂಡ್ರೆ ಮಾತನಾಡಿ, ಒಬ್ಬ ಆದರ್ಶ ಪುರುಷನ ಚಿತ್ರಣವನ್ನು ಕಲ್ಪಿಸಿಕೊಡುವುದು, ಮೌಲ್ಯವನ್ನು ಎತ್ತಿ ಹಿಡಿಯುವುದು ರಾಮಾಯಣದ ವಿಶೇಷ. ವಾಲ್ಮೀಕಿ ಎಂದರೆ ಮಹಾನ್ ಜ್ಞಾನ ಇದ್ದಂತೆ. ಆ ಜ್ಞಾನದ ಬೆಳಕಿನ ಕಿಂಡಿ ನಮ್ಮ ಬದುಕನ್ನು ಸದಾಕಾಲ ಬೆಳಗಲಿದೆ ಎಂದರು.
ಬೀದರ್ ವಿಶ್ವವಿದ್ಯಾಲಯದ ಅಧ್ಯಾಪಕ ಡಾ.ರಾಮಚಂದ್ರ ಗಣಾಪುರ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ 24 ಸಾವಿರ ಶ್ಲೋಕಗಳ ಮಹಾ ಗ್ರಂಥವನ್ನು ರಚಿಸಿದ್ದಾರೆ. ರಾಮಾಯಣ ಹಾಗೂ ಮಹಾಭಾರತ ಗ್ರಂಥಗಳಲ್ಲಿ ಧರ್ಮದಿಂದ ಬದುಕು ಸಾಗಿಸುವ ಮಾರ್ಗ ಅಡಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಅಪರ ಜಿಲ್ಲಾಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ಶಿವಮಾನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಮುಖಂಡರಾದ ಜಗನ್ನಾಥ ಜಮಾದಾರ, ಸುನೀಲ ಭಾವಿಕಟ್ಟಿ, ಮಾರುತಿ ಮಾಸ್ಟರ್ ಇತರರಿದ್ದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಹರ್ಷಿ ವಾಲ್ಮೀಕಿ ಜೀವನ ಸಂದೇಶ ಕುರಿತು ಕಿರು ಹೊತ್ತಗೆ ಬಿಡುಗಡೆ ಮಾಡಿದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.