

ಬೀದರ್: ರಾಜ್ಯ ಸರ್ಕಾರ ಸಮರ್ಪಕವಾಗಿ ಜಾತಿಗಣತಿ ಮಾಡವವರೆಗೂ ಪರಿಶಿಷ್ಟರ ಒಳ ಮೀಸಲಾತಿ ಜಾರಿಗೊಳಿಸಬಾರದು ಎಂದು ಗೋರ ಸೇನಾ ಜಿಲ್ಲಾ ಘಟಕ ಆಗ್ರಹಿಸಿದೆ.
ನಗರದಲ್ಲಿ ಗೋರ ಸೇನಾ ಪದಾಧಿಕಾರಿಗಳು ಹಾಗೂ ಬಂಜಾರಾ ಸಮಾಜದ ಮುಖಂಡರು ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿ, ಒಳ ಮೀಸಲಾತಿ ಹಾಗೂ ವರ್ಗೀಕರಣವು ಬಂಜಾರಾ ಸಮಾಜದ ವಿರೋಧಿಯಾಗಿದೆ. ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು ಅಸಂವಿಧಾನಾತ್ಮಕ ಮತ್ತು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸಲು ತಂದ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
ಆಲ್ ಇಂಡಿಯಾ ಬಂಜಾರಾ ಸಮಾಜದ ಜಿಲ್ಲಾಧ್ಯಕ್ಷ ಗೋವರ್ಧನ್ ರಾಠೋಡ್, ಪ್ರಧಾನ ಕಾರ್ಯದರ್ಶಿ ಬನಸಿಧರ್ ರಾಠೋಡ್, ಗೋರ ಸೇನಾ ಜಿಲ್ಲಾಧ್ಯಕ್ಷ ಉತ್ತಮ ಜಾಧವ್, ಉಪಾಧ್ಯಕ್ಷ ನೀಲಕಂಠ ರಾಠೋಡ್, ಪ್ರಧಾನ ಕಾರ್ಯದರ್ಶಿ ರಮೇಶ್ ಜಾಧವ್, ಸಂತೋಷ್ ಬಾಣೋತ್, ಬಾಬುರಾವ ಜಾಧವ್, ಸುನೀಲ ರಾಠೋಡ್, ಅಶೋಕ ತಳಘಾಟ, ಕೃಷ್ಣ ರಾಠೋಡ್, ಸರಿತಾ ರಾಠೋಡ್, ನಿರ್ಮಲಾ ರಾಠೋಡ್, ಧನರಾಜ ಅಲಿಪುರ ಇತರರಿದ್ದರು.