

ಬೀದರ್: ನಗರ ಸೇರಿ ಜಿಲ್ಲಾದ್ಯಂತ ಶನಿವಾರ ವಿಜಯದಶಮಿ, ದಸರಾ ಉತ್ಸವ ಸಡಗರದೊಂದಿಗೆ ಜರುಗಿತು. ದೇವಿ (ಭವಾನಿ ಮಾತಾ) ಮಂದಿರಗಳಲ್ಲಿ ವಿಶೇಷ ಪೂಜೆ ನಡೆದವು. ಹೊಸ ಬಟ್ಟೆ ತೊಟ್ಟವರು ಸಂಜೆ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು. ಪರಸ್ಪರ ಬೆಳ್ಳಿ, ಬಂಗಾರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ಅಲ್ಲಲ್ಲಿ ಸೀಮೋಲ್ಲಂಘನ ಕಾರ್ಯಕ್ರಮ ಜರುಗಿದವು.
ನಗರ, ಪಟ್ಟಣ ಜತೆಗೆ ಹಳ್ಳಿಗಳಲ್ಲೂ ಹಬ್ಬದ ಸಂಭ್ರಮ ಜೋರಾಗಿತ್ತು. ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಊರ ಹೊರವಲಯಕ್ಕೆ ತೆರಳಿ ಬನ್ನಿ ಮುಡಿಯುವ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ವೇಳೆ ಆಯುಧ ಪೂಜೆಯೂ ನಡೆಯಿತು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಧು-ಮಿತ್ರರನ್ನು ಆಹ್ವಾನಿಸಿ ಸವಿರುಚಿ ಹಂಚಿಕೊಳ್ಳಲಾಯಿತು.
ಶ್ರೀ ರಾಮಲೀಲಾ ಉತ್ಸವ ಸಮಿತಿಯಿಂದ ನಗರದ ಸಾಯಿ ಶಾಲೆ ಆವರಣದಲ್ಲಿ ಶುಕ್ರವಾರ ಮತ್ತು ಶನಿವಾರ ವಿವಿಧ ಕಾರ್ಯಕ್ರಮ ನಡೆದವು. ಶುಕ್ರವಾರ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ದೇಶಭಕ್ತಿ ಗೀತೆಗಳು ಜನಮನ ರಂಜಿಸಿದವು. ಶನಿವಾರ ರಾತ್ರಿ ರಾಮಲೀಲಾ ಪ್ರದರ್ಶನ ನಂತರ ಅಸತ್ಯದ ಮೇಲೆ ಸತ್ಯದ ಜಯ ಮತ್ತು ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ 42 ಅಡಿ ಎತ್ತರದ ರಾವಣನ ಪ್ರತಿರೂಪವನ್ನು ದಹಿಸಲಾಯಿತು. ದಹನ ಕಾರ್ಯಕ್ರಮ ನೋಡಲು ಸಹಸ್ರಾರು ಮಂದಿ ಸೇರಿದ್ದರು. ರಾಮಲೀಲಾ ಉತ್ಸವ ಸಮಿತಿಯು 18 ವರ್ಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಮುಖಂಡರಾದ ಗುರುನಾಥ ಕೊಳ್ಳುರ್, ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ, ಪ್ರಮುಖರಾದ ಡಾ.ರಜನೀಶ್ ವಾಲಿ, ಶಂಕರರಾವ ಕೊಟರಗಿ, ಬಾಬುರಾವ ಮಲ್ಕಾಪುರೆ, ವಿರೂಪಾಕ್ಷ ಗಾದಗಿ, ಅಶೋಕ ರೇಜಂತಲ್, ಸಚಿನ್ ಕೊಳ್ಳುರ್, ಆದೀಶ್ ವಾಲಿ, ರಾಜಶೇಖರ ನಾಗಮೂರ್ತಿ, ರಾಮಕೃಷ್ಣನ್ ಸಾಳೆ, ಸಮಿತಿ ಸಂಸ್ಥಾಪಕ ಈಶ್ವರಸಿಂಗ್ ಠಾಕೂರ್, ಅಧ್ಯಕ್ಷ ಚಂದ್ರಶೇಖರ ಗಾದಾ, ಪ್ರಧಾನ ಕಾರ್ಯದರ್ಶಿ ಮಹೇಶ್ವರ ಸ್ವಾಮಿ, ನಿಲೇಶ್ ರಕ್ಷಾಳ, ರಾಜಕುಮಾರ ಜಮಾದಾರ ಇತರರಿದ್ದರು.