

ಬೀದರ್: ತಾಲ್ಲೂಕಿನ ಹೊನ್ನಿಕೇರಿ ಗ್ರಾಮದಲ್ಲಿ ವಿಜಯದಶಮಿ ಪ್ರಯುಕ್ತ 811ನೇ ಧ್ವಜ ಉತ್ಸವ ಶನಿವಾರ ಭಕ್ತಿ, ಶ್ರದ್ಧೆಯಿಂದ ಜರುಗಿತು.
ಸಿದ್ಧೇಶ್ವರ ದೇಗುಲದ ಹಳೆಯ ಪೀಠಾಧಿಪತಿ ಮನೆಯಿಂದ ದೇಗುಲದ ವರೆಗೆ ಧಾರ್ಮಿಕ ಧ್ವಜದ ಮೆರವಣಿಗೆ ನಡೆಯಿತು. ಬಳಿಕ ಆಲದ ಮರ ಹಾಗೂ ಹುಣಸೆ ಮರಕ್ಕೆ ಧ್ವಜ ಕಟ್ಟಲಾಯಿತು. ನಂತರ ಸಿದ್ಧೇಶ್ವರರಿಗೆ ಪೂಜೆ, ನೈವೇದ್ಯ ಸಮರ್ಪಿಸಲಾಯಿತು.
ಧ್ವಜ ಉತ್ಸವ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೇಗುಲದ ಪೀಠಾಧಿಕಾರಿಯಾಗಿದ್ದ ಸಿದ್ದಲಿಂಗಯ್ಯ ಸ್ವಾಮಿ ಅವರ ನಿಧನದ ನಂತರ ಅವರ ಕಿರಿಯ ಪುತ್ರ ನಾಗಯ್ಯ ಸ್ವಾಮಿ ಅವರು ಉತ್ಸವ ಮುನ್ನಡೆಸುತ್ತಿದ್ದಾರೆ ಎಂದು ಪ್ರಶಾಂತಯ್ಯ ಸ್ವಾಮಿ ತಿಳಿಸಿದರು.
ಪ್ರಮುಖರಾದ ಸಿದ್ದಯ್ಯ ನಾಗಯ್ಯ ಸ್ವಾಮಿ, ರಾಮಯ್ಯ ಸ್ವಾಮಿ, ರಾಜಕುಮಾರ ಸ್ವಾಮಿ, ಗುರುಶಾಂತಯ್ಯ ಸ್ವಾಮಿ, ಶ್ರೀಕಾಂತಯ್ಯ ಸ್ವಾಮಿ, ವಿಶ್ವನಾಥ ಸ್ವಾಮಿ, ಆಕಾಶ ಸ್ವಾಮಿ, ಅಭಿಷೇಕ ಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.